ಪಾಟ್ನಾ: ಬಿಹಾರದಲ್ಲಿ (Bihar) ಶೈಕ್ಷಣಿಕ ಪ್ರವಾಸಕ್ಕೆ (Educational Tour) ತೆರಳಿದ್ದ ವೇಳೆ ಮದ್ಯಪಾನ (Alcohol) ಮಾಡಿ ಮಜಾ ಮಾಡಿದ ಐವರು ಶಿಕ್ಷಕರನ್ನು (Teachers) ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿಷ್ಯಾಂಶ ಕುಮಾರ್, ದೀಪನಾರಾಯಣ ರಾಮ್, ಇಂಗ್ಲಿಷ್ ಕುಮಾರ್, ಧೀರೇಂದ್ರ ಕುಮಾರ್ ಮತ್ತು ಮಿಥು ಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲ ‘ಬಿಹಾರ ದರ್ಶನ’ ಯೋಜನೆಯಡಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ನೇಪಾಳಕ್ಕೆ ತೆರಳಿದ್ದರು. ವಾಪಸ್ ಆಗುವಾಗ ಭೀಮನಗರ ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ತಪಾಸಣೆ ವೇಳೆ ಇವರೆಲ್ಲ ಕುಡಿದಿರುವುದು ಗೊತ್ತಾಗಿದೆ. ಇದನ್ನೂ ಓದಿ: ನಕಲಿ ವೈದ್ಯನ ಇಂಜೆಕ್ಷನ್‌ಗೆ 9ನೇ ತರಗತಿ ವಿದ್ಯಾರ್ಥಿನಿ ಬಲಿ
ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಪ್ರಿಯದರ್ಶಿ, ಶಿಕ್ಷಕರನ್ನು ನಿಲ್ಲಿಸಿ ಉಸಿರು ವಿಶ್ಲೇಷಕ ಯಂತ್ರ (Breath Analyzer) ಬಳಸಿ ಪರೀಕ್ಷಿಸಲಾಯಿತು. ಎಲ್ಲಾ ಐದು ವ್ಯಕ್ತಿಗಳು ಕುಡಿದಿರುವುದು ದೃಢವಾಗಿದೆ. ಬಿಹಾರದಲ್ಲಿ ಮದ್ಯದ ಮೇಲೆ ಸಂಪೂರ್ಣ ನಿಷೇಧವಿದೆ. ಮದ್ಯ ಸೇವನೆ, ಖರೀದಿ, ಮಾರಾಟ ಮತ್ತು ಸಾಗಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿತ ಶಿಕ್ಷಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಶಿಕ್ಷಣ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಶಿಕ್ಷಕರ ವಿರುದ್ಧ ಅಮಾನತು ಪ್ರಕ್ರಿಯೆ ಶುರುವಾಗಿದೆ ಎಂದು ಸುಪಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾವನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಘಟನೆಯ ನಂತರ, ಸ್ಥಳೀಯ ನಿವಾಸಿಗಳು ಶಿಕ್ಷಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊಂದಿರುವ ಶಿಕ್ಷಕರ ಇಂತಹ ನಡವಳಿಕೆ ತೀವ್ರ ಬೇಸರ ತರಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಸ್ತೆ ದಾಟುವಾಗ ಕಾರು ಡಿಕ್ಕಿ – ಆಗಷ್ಟೇ SSLC ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿ ಸಾವು

