ಚಂಡೀಗಢ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2026) ವಿವಾದಗಳು ಹೊಸದೇನಲ್ಲ. ನೋಬಾಲ್, ವೈಡ್, ಅಂಪೈರ್ ತೀರ್ಮಾನ, ನಿಯಮ ಬಾಹಿರ ಬ್ಯಾಟ್ ಬಳಕೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಚರ್ಚೆಯೊಂದು ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವಿನ ಪಂದ್ಯದ ಬಳಿಕ ಹುಟ್ಟಿಕೊಂಡಿದೆ.
Unexpected twist right in the middle of the game 👀
The umpires step in and stop Rahul Tewatia as his bat doesn’t meet the regulations! 😮#TATAIPL 2026 | #PBKSvGT | LIVE NOW 👉 https://t.co/8O2J6XJtcm pic.twitter.com/txanPzNCPk
— Star Sports (@StarSportsIndia) March 31, 2026
ಮಂಗಳವಾರ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಹೈಡ್ರಾಮಾವೊಂದು ನಡೆದಿದೆ. 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದ ಟೈಟಾನ್ಸ್ ಆಟಗಾರ ರಾಹುಲ್ ತೆವಾಟಿಯಾ (Rahul Tewatia) ಅಂಪೈರ್ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಹೌದು. ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾ ಅವರನ್ನ ತಡೆದ ಅಂಪೈರ್‌ಗಳು ಅವರ ಬ್ಯಾಟ್ ಪರಿಶೀಲಿಸಿದ್ರು. ಬ್ಯಾಟ್ ಗೇಜ್ ಸಾಧನದಿಂದ ಪರಿಶೀಲನೆ (Bat Gauge Test) ನಡೆಸಿದಾಗ ತೆವಾಟಿಯಾ ತಂದಿದ್ದ ಬ್ಯಾಟ್ ಐಪಿಎಲ್ ನಿಯಮಗಳಿಗೆ ವಿರುದ್ಧವಾಗಿದ್ದದ್ದು ಕಂಡುಬಂದಿದೆ. ಬಳಿಕ ಬ್ಯಾಟಿಂಗ್‌ಗೆ ಅವಕಾಶ ಕೊಡದ ಅಂಪೈರ್‌ಗಳು ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ರು. ಬಳಿಕ ತೆವಾಟಿಯಾ ಹೊಸ ಬ್ಯಾಟ್ ತರಿಸಿಕೊಂಡು ಕ್ರೀಸ್‌ಗಿಳಿದರು. ಈ ವಿಡಿಯೋ ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸಹಜವಾಗಿ ಆಟಗಾರರು ಮೈದಾನ ಪ್ರವೇಶಿಸುವ ಮುನ್ನವೇ ಬೌಂಡರಿ ಹೊರಗಿರುವ ಫೋರ್ಥ್ ಅಂಪೈರ್ ಬ್ಯಾಟ್ ಪರಿಶೀಲಿಸಿ ಕಳಿಸುತ್ತಾರೆ. ಕಳೆದ ಆವೃತ್ತಿಯಲ್ಲೂ ಇದೇ ರೀತಿ ಮಾಡಲಾಗಿತ್ತು. ಆದ್ರೆ ಈ ಆವೃತ್ತಿಯಲ್ಲಿ ಆಟಗಾರರು ಕ್ರೀಸ್‌ಗೆ ಬಂದ ಬಳಿಕ ಬ್ಯಾಟ್ ಪರಿಶೀಲಿಸಲಾಗುತ್ತಿದೆ. ಮಾರ್ಚ್ 30 ರಂದು ಸಹ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಆಟಗಾರ ಸರ್ಫರಾಜ್ ಖಾನ್ ಅವರಿಗೂ ಇದೇ ರೀತಿ ಆಗಿತ್ತು. ಸರ್ಫರಾಜ್ ತಂದಿದ್ದ ಬ್ಯಾಟ್ ಗೇಜ್ ಪರೀಕ್ಷೆಯಲ್ಲಿ ವಿಫಲವಾದ ಬಳಿಕ ಕೂಡಲೇ ಬ್ಯಾಟ್ ಬದಲಾವಣೆ ಮಾಡಿಸಲಾಗಿತ್ತು.
ನಿಯಮ ಹೇಳೋದೇನು?
ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ ಕ್ರಿಕೆಟ್ ನಿಯಮದ ಪ್ರಕಾರ, ಬ್ಯಾಟ್‌ನ ಅಂಚುಗಳು 4 ಸೆಂ.ಮೀ (1.56 ಇಂಚುಗಳು) ಗಿಂತ ಹೆಚ್ಚಿರಬಾರದು ಮತ್ತು ಬ್ಯಾಟ್‌ನ ಗರಿಷ್ಠ ಒಟ್ಟಾರೆ ಆಳ 6.7 ಸೆಂ.ಮೀ (2.64 ಇಂಚುಗಳು) ಆಗಿರಬೇಕು. ಬ್ಯಾಟ್‌ನ ಅಗಲ 10.8 ಸೆಂ.ಮೀ (4.25 ಇಂಚುಗಳು) ಗಿಂತ ಹೆಚ್ಚಿರಬಾರದು ಎಂದು ಹೇಳುತ್ತದೆ. 2018 ರಲ್ಲಿ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಈ ನಿಯಮವನ್ನು ಮೊದಲು ಜಾರಿಗೆ ತಂದಿತು. ಬಳಿಕ ಐಪಿಎಲ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ.
ನಿರೀಕ್ಷಿತ ಪ್ರದರ್ಶನ ನೀಡದ ತೆವಾಟಿಯಾ
ಸಾಮಾನ್ಯವಾಗಿ ಡೆತ್ ಓವರ್‌ಗಳಲ್ಲಿ ಕ್ರೀಸ್‌ಗೆ ಬರುವ ರಾಹುಲ್ ತೆವಾಟಿಯಾ ಕೊನೆಯಲ್ಲಿ ಸಿಕ್ಸರ್ ಬೌಂಡರಿ ಸಿಡಿಸಿ ಅಬ್ಬರಿಸುತ್ತಿದ್ದರು. ಆದ್ರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 10 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 11 ರನ್ ಗಳಿಸಿದ್ರು. ಇದು ಒಂದು ಕಡೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ರೆ ಮತ್ತೊಂದು ಕಡೆ ಬ್ಯಾಟ್ ನಿಯಮದ ಬಗ್ಗೆ ಪರ – ವಿರೋಧ ಚರ್ಚೆಗಳೂ ಹುಟ್ಟಿಕೊಂಡಿವೆ.

