ಒಟ್ಟಾವ: ನಾಲ್ಕು ದಶಕಗಳಲ್ಲೇ ಇದೇ ಮೊದಲ ಬಾರಿಗೆ, 1985 ರಲ್ಲೇ ನಡೆದಿದ್ದ ಭೀಕರ ಏರ್ ಇಂಡಿಯಾ (Air India) ಫ್ಲೈಟ್ 182 (ಕನಿಷ್ಕ) ಬಾಂಬ್ ಸ್ಫೋಟದ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ (Khalistani Terrorists) ಕೈವಾಡ ಇತ್ತು ಎಂಬುದನ್ನು ಕೆನಡಾದ (Canada) ಗುಪ್ತಚರ ಸಂಸ್ಥೆ ‘ಸಿಎಸ್ಐಎಸ್’ (CSIS – Canadian Security Intelligence Service) ಅಧಿಕೃತವಾಗಿ ಒಪ್ಪಿಕೊಂಡಿದೆ.
ಇದನ್ನು ಒಂದು “ಹೇಯ ಭಯೋತ್ಪಾದನಾ ಕೃತ್ಯ” ಎಂದು ಕರೆದಿರುವ ಕೆನಡಾ ಗುಪ್ತಚರ ಸಂಸ್ಥೆಯು, ಕೆನಡಾದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಖಲಿಸ್ತಾನಿ ಭಯೋತ್ಪಾದಕರು ಇರಿಸಿದ್ದ ಬಾಂಬ್‌ನಿಂದಾಗಿ ವಿಮಾನವು ಪತನಗೊಂಡಿತು ಎಂದು ತಿಳಿಸಿದೆ.
ಗುಪ್ತಚರ ಸಂಸ್ಥೆ ಹೇಳಿದ್ದೇನು?
ಭಯೋತ್ಪಾದನೆ ಸಂತ್ರಸ್ತರ ರಾಷ್ಟ್ರೀಯ ಸ್ಮರಣ ದಿನದ ಅಂಗವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಸ್ಐಎಸ್,ಭೀಕರ ಭಯೋತ್ಪಾದನಾ ಕೃತ್ಯದಿಂದಾಗಿ ಏರ್ ಇಂಡಿಯಾ ಫ್ಲೈಟ್ 182 ರಲ್ಲಿ ಪ್ರಾಣ ಕಳೆದುಕೊಂಡ 329 ಜನರನ್ನು CSIS ಸ್ಮರಿಸುತ್ತದೆ. ಜೂನ್ 23, 1985 ರಂದು ಕೆನಡಾ ಮೂಲದ ಖಲಿಸ್ತಾನಿ ಉಗ್ರರು ಇಟ್ಟಿದ್ದ ಬಾಂಬ್ ವಿಮಾನವನ್ನು ಧ್ವಂಸಗೊಳಿಸಿತು. ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದರು, ಅವರಲ್ಲಿ ಹೆಚ್ಚಿನವರು ಕೆನಡಾದ ಪ್ರಜೆಗಳಾಗಿದ್ದರು. ಇದು ಕೆನಡಾದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ ಮತ್ತು ನಮ್ಮ ರಾಷ್ಟ್ರೀಯ ಭದ್ರತಾ ಸಮುದಾಯಕ್ಕೆ ಒಂದು ಪ್ರಮುಖ ತಿರುವು ನೀಡಿದ ಕ್ಷಣವಾಗಿದೆ ಎಂದು ಉಲ್ಲೇಖಿಸಿದೆ.
ಮಾರ್ಕ್ ಕಾರ್ನೆ ಗೌರವ ನಮನ:
ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನೆ(Mark Carney) ಅವರು ಕೂಡ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ್ದು, ಕನಿಷ್ಕ ಬಾಂಬ್ ಸ್ಫೋಟವನ್ನು ದೇಶದ ಇತಿಹಾಸದಲ್ಲೇ ಅತ್ಯಂತ ಕ್ರೂರ ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಹಿಂಸಾತ್ಮಕ ಉಗ್ರವಾದವನ್ನು ಮಟ್ಟಹಾಕಲು ಕೆನಡಾ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ.
ಏನಿದು ಘಟನೆ?
ಜೂನ್ 23, 1985 ರಂದು ಏರ್ ಇಂಡಿಯಾ ವಿಮಾನವು ಮಾಂಟ್ರಿಯಲ್‌ನಿಂದ ಲಂಡನ್ ಮಾರ್ಗವಾಗಿ ನವದೆಹಲಿಗೆ ಪ್ರಯಾಣಿಸುತ್ತಿತ್ತು. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯಲು ಇನ್ನು 45 ನಿಮಿಷಗಳು ಬಾಕಿ ಇರುವಾಗ, ಅಟ್ಲಾಂಟಿಕ್ ಮಹಾಸಾಗರದ (ಐರ್ಲೆಂಡ್ ಕರಾವಳಿ ಹತ್ತಿರ) ಮೇಲ್ಭಾಗದಲ್ಲಿ ವಿಮಾನದಲ್ಲಿದ್ದ ಸೂಟ್‌ಕೇಸ್ ಬಾಂಬ್ ಸ್ಫೋಟಗೊಂಡಿತು.
ವಿಮಾನದಲ್ಲಿದ್ದ ಎಲ್ಲಾ 329 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದರು. ಇವರಲ್ಲಿ 268 ಕೆನಡಾ ಪ್ರಜೆಗಳು (ಹೆಚ್ಚಿನವರು ಭಾರತೀಯ ಮೂಲದವರು) ಮತ್ತು 24 ಭಾರತೀಯ ಪ್ರಜೆಗಳು ಸೇರಿದ್ದರು. ಮಹಾಸಾಗರದಿಂದ ಕೇವಲ 131 ಮೃತದೇಹಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗಿತ್ತು.
1984 ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಸಶಸ್ತ್ರ ಉಗ್ರರನ್ನು ಹೊರಹಾಕಲು ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆಗೆ ಪ್ರತಿಕಾರವಾಗಿ ಖಲಿಸ್ತಾನಿ ಉಗ್ರರು ಈ ಸಂಚು ರೂಪಿಸಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿತ್ತು.
ರಾಜತಾಂತ್ರಿಕ ಸಂಘರ್ಷ
ಕನಿಷ್ಕ ವಿಮಾನ ಸ್ಫೋಟವು ಕೆನಡಾದ ಇತಿಹಾಸದ ಅತ್ಯಂತ ದೊಡ್ಡ ಭಯೋತ್ಪಾದಕ ದಾಳಿಯಾಗಿದ್ದು, ದೀರ್ಘಕಾಲದಿಂದ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿತ್ತು. ಕೆನಡಾದ ನೆಲದಿಂದ ನಡೆಯುತ್ತಿರುವ ಖಲಿಸ್ತಾನಿ ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ಭಾರತ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಲೇ ಬಂದಿತ್ತು.
ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಅವಧಿಯಲ್ಲಿ ತೀರಾ ಹದಗೆಟ್ಟಿದ್ದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವು, ಈ ವರ್ಷ ಮಾರ್ಕ್ ಕಾರ್ನೆ ಅವರು ಕೆನಡಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸುಧಾರಣೆಯ ಹಾದಿಗೆ ಮರಳುತ್ತಿರುವುದನ್ನು ಈ ಬೆಳವಣಿಗೆ ತೋರಿಸುತ್ತದೆ.
ವಿಮಾನಕ್ಕೆ ಕನಿಷ್ಕ ಹೆಸರು ಯಾಕೆ?
1970 ಮತ್ತು 1980ರ ದಶಕದಲ್ಲಿ ಏರ್ ಇಂಡಿಯಾ ಸಂಸ್ಥೆಯು ತನ್ನ ದೂರದ ಪ್ರಯಾಣದ ಬೋಯಿಂಗ್ ವಿಮಾನಗಳಿಗೆ ಭಾರತದ ಮಹಾನ್ ರಾಜರು ಮತ್ತು ಚಕ್ರವರ್ತಿಗಳ ಹೆಸರನ್ನು (ಉದಾಹರಣೆಗೆ: ಚಕ್ರವರ್ತಿ ಅಶೋಕ, ಚಕ್ರವರ್ತಿ ಅಕ್ಬರ್, ಚಕ್ರವರ್ತಿ ಶಾಜಹಾನ್) ಇಡುವ ಸಂಪ್ರದಾಯವನ್ನು ಹೊಂದಿತ್ತು. ಅದರ ಭಾಗವಾಗಿಯೇ VT-EFO ನೋಂದಣಿ ಸಂಖ್ಯೆಯ ಬೋಯಿಂಗ್ 747-237B ವಿಮಾನಕ್ಕೆ ‘ಚಕ್ರವರ್ತಿ ಕನಿಷ್ಕ’ ಎಂದು ಹೆಸರಿಸಲಾಗಿತ್ತು.
