ಬಾಗಲಕೋಟೆ: ಬಡವರಿಗಾಗಿ ನೀಡಲಾಗುವ ಅನ್ನಭಾಗ್ಯ ಯೋಜನೆಯ (Anna Bhagya) ಪಡಿತರ ಅಕ್ಕಿಯನ್ನು ಅಕ್ರಮವಾಗಿ ಪರರಾಜ್ಯಕ್ಕೆ ಸಾಗಿಸುತ್ತಿದ್ದ ಲಾರಿಯೊಂದನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದ ಘಟನೆ ಇಳಕಲ್(Ilkal) ಬಳಿ ನಡೆದಿದೆ.
ಇಳಕಲ್ ಸಮೀಪದ ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಈ ಘಟನೆ ನಡೆದಿದೆ. ಸುಮಾರು 35 ಟನ್ಗೂ ಹೆಚ್ಚು ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯ ಮೂಟೆಗಳನ್ನು ಹೊತ್ತುಕೊಂಡು ಲಾರಿಯು ರಾಜಸ್ಥಾನದತ್ತ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ರಾತ್ರೋರಾತ್ರಿ ಸಾಗಾಟವಾಗುತ್ತಿದ್ದ ಈ ಲಾರಿಯ ಬಗ್ಗೆ ಸಂಶಯಗೊಂಡ ಸ್ಥಳೀಯ ನಿವಾಸಿಗಳು ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಅಕ್ಕಿ ಸಾಗಣೆ ಜಾಲ ಬಯಲಾಗಿದೆ.
ಕರ್ನಾಟಕದ ಬಡ ಜನರ ಹಸಿವು ನೀಗಿಸಬೇಕಾದ ಪಡಿತರ ಅಕ್ಕಿ ನಿರಂತರವಾಗಿ ದಲ್ಲಾಳಿಗಳ ಪಾಲಾಗುತ್ತಿದ್ದು, ರಾಜಾರೋಷವಾಗಿ ಪರರಾಜ್ಯಗಳಿಗೆ ಅಕ್ರಮವಾಗಿ ಕಳ್ಳಸಾಗಣೆ ಆಗುತ್ತಿದ್ದರೂ ಆಹಾರ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಲಾರಿ ಸಮೇತ ಅಕ್ಕಿಯನ್ನು ತಡೆಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಸಾಗಣೆಯ ಹಿಂದಿರುವ ಜಾಲದ ಪತ್ತೆಗೆ ತನಿಖೆ ಮುಂದುವರಿದಿದೆ.
