– ಈಗಲೇ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲು
– ಮೇ ತಿಂಗಳ ವೇಳೆಗೆ 44 ಡಿಗ್ರಿ ಸೆಲ್ಸಿಯಸ್ ದಾಟಲಿರುವ ಉಷ್ಣಾಂಶ
ರಾಯಚೂರು: ಜಿಲ್ಲೆಯಲ್ಲಿ ವಾತಾವರಣ ಗೊಂದಲ ಶುರುವಾಗಿದ್ದು, ಬೆಳಗ್ಗೆ ಚಳಿ ಮಧ್ಯಾಹ್ನ ಬಿರುಬಿಸಿಲು ಜನರನ್ನು ಕಾಡುತ್ತಿದೆ. ಆದರೆ ಫೆಬ್ರವರಿ ತಿಂಗಳಲ್ಲೇ ಜೋರು ಬಿಸಿಲು ಆರಂಭವಾಗಿರುವುದು ಈ ಬಾರಿಯ ಬೇಸಿಗೆ ಬಗ್ಗೆ ಜನರಲ್ಲಿ ಭಯ ಹುಟ್ಟಿಸಿದೆ.
ರಾಯಚೂರಿನಲ್ಲಿ ಒಂದು ಮಾತಿದೆ ಜಿಲ್ಲೆಯಲ್ಲಿ ಇರೋದು ಎರಡೇ ಕಾಲವಂತೆ ಒಂದು ಬೇಸಿಗೆ ಕಾಲ ಇನ್ನೊಂದು ಬಿರುಬೇಸಿಗೆ ಕಾಲ. ಇಷ್ಟು ದಿನ ಬೇಸಿಗೆ ಕಾಲವಿತ್ತು. ಆದರೆ ಎಲ್ಲಡೆ ಬೇಸಿಗೆ ಆರಂಭವಾಗುತ್ತಿದ್ದಂತೆ ರಾಯಚೂರಿನಲ್ಲಿ ಈಗ ಬಿರುಬೇಸಿಗೆ ಆರಂಭವಾಗಿದೆ.
Advertisement
Advertisement
ಜಿಲ್ಲೆಯನ್ನು ಬಿಸಿಲನಾಡು ಎಂದು ಸುಮ್ಮನೆ ಕರೆದಿಲ್ಲ. ಏಕೆಂದರೆ ಫೆಬ್ರವರಿ ತಿಂಗಳಲ್ಲೇ ಬಿಸಿಲಿನ ಝಳ ಇಲ್ಲಿನ ಜನರ ಮೈ ಸುಡುತ್ತಿದೆ. ಮಧ್ಯಾಹ್ನವಾದರೆ ಚುರ್ ಎನ್ನುವ ಬಿಸಿಲು ಆರಂಭವಾಗಿದೆ. ಚಳಿಗಾಲ ಅದ್ಯಾವಾಗ ಆರಂಭವಾಯ್ತೂ ಅದ್ಯಾವಾಗ ಮುಗಿದು ಹೋಯ್ತೋ ಗೊತ್ತಿಲ್ಲ. ಬಿಸಿಲು ಮಾತ್ರ ತನ್ನ ಆರ್ಭಟವನ್ನು ಶುರು ಮಾಡಿದೆ. ಹೀಗಾಗಿ ನಗರದ ಯಾವುದೇ ರಸ್ತೆಗೆ ಇಳಿದರು ಎಳನೀರಿನ ಅಂಗಡಿಗಳು, ಕಲ್ಲಂಗಡಿ, ಜ್ಯೂಸ್ ಅಂಗಡಿಗಳು, ಮಣ್ಣಿನ ಗಡಿಗೆ ಮಾರಾಟ ಈಗಲೇ ಜೋರಾಗಿ ನಡೆದಿದೆ. ಈ ಬಾರಿ ಮುಂಬರುವ ಬಿಸಿಲಿಗೆ ಜನ ಈಗಲೇ ಹೆದರಿದ್ದಾರೆ.
Advertisement
Advertisement
ಇನ್ನೂ ಆರ್‌ಟಿಪಿಎಸ್, ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಇರುವುದರಿಂದ ಬಿಸಿಲಿನ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಬಿಸಿಲಿನ ತಾಪಮಾನದಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಲು ಜನ ಮುಂದಾಗಿದ್ದಾರೆ.
ಪಶ್ಚಿಮ ದೇಶಗಳಿಂದ ಬೀಸುತ್ತಿರುವ ತಣ್ಣನೇ ಗಾಳಿಯಿಂದ ಬೆಳಗ್ಗಿನ ಜಾವ ಸ್ವಲ್ಪ ಚಳಿ ಹಾಗೂ ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ಬಿಸಿ ಗಾಳಿಯಿಂದ ಮಧ್ಯಾಹ್ನ ವೇಳೆಗೆ ವಿಪರೀತ ಬಿಸಿ ವಾತಾವರಣವಿದೆ. ಆದರೆ ಈ ಬಾರಿಯೂ ಹೆಚ್ಚು ತಾಪಮಾನ ದಾಖಲಾಗುವ ಸಂಭವವಿದೆ ಎಂದು ರಾಯಚೂರು ಕೃಷಿ ವಿವಿ ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ರಾಯಚೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, 44 ಡಿಗ್ರಿ ಸೆಲ್ಸಿಯಸ್‍ವರೆಗೆ ಹೆಚ್ಚಾಗಲಿದೆ. ಅಲ್ಲದೆ ಪ್ರತಿ ವರ್ಷ 0.5ಯಿಂದ 0.75 ಡಿಗ್ರಿ ಸೆಲ್ಸಿಯಸ್‍ವರೆಗೆ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು, ಮನುಷ್ಯರು ಹಾಗೂ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ರಾಯಚೂರು ಕೃಷಿ ವಿವಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಬೇಸಿಗೆ ಕಾಲ ಬಂದರೆ ರಾಯಚೂರಿನ ಜನ ಮನೆಯಿಂದ ಹೊರಬರಲು ಹೆದರುವ ಪರಸ್ಥಿತಿಯಿದ್ದು, ಯಾವಾಗ ಬದಲಾಗುತ್ತೋ ಗೊತ್ತಿಲ್ಲ. ನವಜಾತ ಶಿಶುಗಳಿಗೆ ನಿರ್ಜಲೀಕರಣದ ಸಮಸ್ಯೆ ಬೇಸಿಗೆಯಲ್ಲಿ ವಿಪರೀತವಾಗಿ ಕಾಡುತ್ತದೆ. ಹೀಗಾಗಿ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಬೇಸಿಗೆ ಆರಂಭದಲ್ಲೆ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಲು ವೈದ್ಯರು ಸಹ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.