ಭುವನೇಶ್ವರ: ನಕಲಿ ಮದ್ಯವನ್ನು ಸೇವಿಸಿ 29 ಮಂದಿ ಅಸ್ವಸ್ಥಗೊಂಡು ಮೂವರು ಸಾವನ್ನಪ್ಪಿರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ.
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕಾಗಿ ಸ್ಥಳೀಯ ರಾಜಕೀಯ ನಾಯಕರು ಮತ ಹಾಕಲು ಜನರಿಗೆ ಹಣವನ್ನು ನೀಡಿದ್ದರು. ಈ ಹಣವನ್ನು ಬಳಸಿಕೊಂಡು ಅಲ್ಲಿನ ಜನರು ಮದ್ಯ ಖರೀದಿಸಿ ಕುಡಿದಿದ್ದರು. ಬಳಿಕ ಹೀಗೆ ಅಸ್ವಸ್ಥಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಅಂತ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.
Advertisement
Advertisement
ಭದ್ರಾಕ್ ಜಿಲ್ಲೆಯ ತಿಹಿಡೀ ಪೊಲೀಸ್ ಠಾಣಾ ವ್ಯಾಪ್ತಿಯ ದೌಲತಪುರ ಗ್ರಾಮದ ಜನರು ಮತದಾನದ ಬಳಿಕ ಸ್ಥಳೀಯ ಮಾರುಕಟ್ಟೆಯಿಂದ ಮದ್ಯ ಖರೀದಿಸಿ ತಂದಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.
Advertisement
ಘಟನೆಯಲ್ಲಿ ಅಸ್ವಸ್ಥರಾದ 29 ಮಂದಿಯನ್ನು ಎಸ್‍ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತರನ್ನು ಸುಧಾ ಚರಣ್ ನಾಯಕ್, ಸರಬೇಸವಾ ದಾಸ್, ರಾಮಚಂದ್ರ ದಾಸ್ ಎಂದು ಗುರುತಿಸಲಾಗಿದೆ.
Advertisement
ನಕಲಿ ಮದ್ಯವನ್ನು ಸೇವಿಸಿದ ಬಳಿಕ ಕೆಲವರಿಗೆ ಹೊಟ್ಟೆ ನೋವು, ಕಣ್ಣು ಕಾಣದಿದ್ದ ಹಾಗೆ ಆಗಿತ್ತು ಎಂದು ಕೆಲವರು ತಿಳಿಸಿದ್ದಾರೆ. ಹಾಗೆಯೇ ಈ ನಕಲಿ ಮದ್ಯ ಸರಬರಾಜು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಭದ್ರಾಕ್‍ನ ಚಂದಬಲಿ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಬಳಿಕ ಪೊಲೀಸರು ಜನರ ಮನವೊಲಿಸಿ ಪ್ರತಿಭಟನೆಗೆ ತೆರೆ ಎಳೆಯಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.