– ತಾಳು ಬೆಟ್ಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಚಾಮರಾಜನಗರ: ಚಿರತೆ (Leopad) ದಾಳಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ಪಾದಯಾತ್ರೆ ಹೋಗುತ್ತಿದ್ದ ಭಕ್ತನ ಸಾವು ಬೆನ್ನಲ್ಲೇ ಅರಣ್ಯ ಇಲಾಖೆ ಚಿರತೆ ಸೆರೆಗೆ ಕೂಂಬಿಂಗ್ ನಡೆಸುತ್ತಿದೆ. ಆದರೆ ಬುಧವಾರ ರಾತ್ರಿ ಕೂಡ ಚಿರತೆ ರಸ್ತೆಯ ತಡೆಗೋಡೆ ಹಾಗೂ ರಸ್ತೆಯ ಪಕ್ಕದಲ್ಲಿ ಇರುವ ವೀಡಿಯೋ ವೈರಲ್ ಆಗಿದ್ದು, ಭಕ್ತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು (Hanur) ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ತಾಳು ಬೆಟ್ಟದಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ ಘಟನೆ ಬುಧವಾರ ನಡೆದಿತ್ತು. ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಬುಧವಾರ ಬೆಳಗ್ಗೆಯಷ್ಟೇ ತಾಳು ಬೆಟ್ಟದಲ್ಲಿ ಪಾದಯಾತ್ರಿಯನ್ನು ಬಲಿ ಪಡೆದಿದ್ದ ಚಿರತೆ ರಾತ್ರಿ ಅದೇ ಜಾಗದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ಕಾರಿನ ಕ್ಯಾಮೆರಾದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸೆರೆಯಾಗಿದೆ. ರಸ್ತೆಯ ತಡೆಗೋಡೆಯ ಮೇಲೆಯೇ ಕುಳಿತು ಚಿರತೆ ವಿಶ್ರಮಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮತ್ತೆ ಚಿರತೆ ಕಾಣಿಸಿಕೊಂಡ ಬೆನ್ನಲ್ಲೇ ಆತಂಕ ಹೆಚ್ಚಾಗಿದೆ. ಚಿರತೆ ಸೆರೆಗಾಗಿ ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಕಾರು, ಬಸ್ಸುಗಳಲ್ಲಿ ಹೋಗುವ ಭಕ್ತರಿಗೂ ಆತಂಕ ಹೆಚ್ಚಿದೆ. ಅಲ್ಲದೇ ತಾಳು ಬೆಟ್ಟದ ಸಮೀಪ ಚಿರತೆ ಹೊಂಚು ಹಾಕುತ್ತಾ ರಸ್ತೆಯ ಪಕ್ಕದಲ್ಲಿ ಇದ್ದ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಯಾತ್ರಿಗಳನ್ನು ತಡೆದು ಬಸ್ ಹತ್ತಿಸಿ ಕಳಿಸುವ ಕೆಲಸಕ್ಕೆ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಕೇಸರಿ ಸೇರಿದಂತೆ ಯಾವುದೇ ಧ್ವಜ ಹಾರಿಸಬೇಡಿ – ರಮಾನಾಥ ರೈ ವಿವಾದಾತ್ಮಕ ಹೇಳಿಕೆ
ಇನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಮತ್ತೆ ಕಾಣಿಸಿಕೊಂಡ ಹಿನ್ನೆಲೆ ಮತ್ತಷ್ಟು ಅಲರ್ಟ್ ಆಗಿದ್ದಾರೆ. ಚಿರತೆ ಸೆರೆಗೂ ಕೂಡ ಚಿರತೆ ಕಾರ್ಯಪಡೆ ಎಂಟ್ರಿ ಕೊಟ್ಟಿದೆ. ಅಲ್ಲದೇ ಈಗಾಗಲೇ ಬೋನು ಕೂಡ ಅಳವಡಿಕೆ ಮಾಡಲಾಗಿದೆ. ಡ್ರೋನ್ ಮೂಲಕವು ಕೂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಕ್ತನ ಸಾವಾಗಿರೋದು ನಮಗೂ ಕೂಡ ಬಹಳ ನೋವು ತಂದಿದೆ. ಇಂತಹ ದುರ್ಘಟನೆ ಬಳಿಕ ಅರಣ್ಯಾಧಿಕಾರಿಗಳಿಗೆ ಸ್ಥಳೀಯ ಶಾಸಕ ಎಚ್ಚರಿಕೆ ಕೊಟ್ಟಿದ್ದಾರೆ. ಪಾದಯಾತ್ರೆಗೆ ಹೋಗುವವರ ಭಕ್ತರ ಅನುಕೂಲಕ್ಕಾಗಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಕೂಡ ಸಮಯ ನಿಗದಿಗೊಳಿಸುವ ಚಿಂತನೆ ಮಾಡಿದ್ದೇವೆ. ಅಲ್ಲದೇ ಭಕ್ತರ ರಕ್ಷಣೆ ನಮ್ಮ ಹೊಣೆ, ಪ್ರತಿ ಜೀವ ಕೂಡ ಮುಖ್ಯವಾಗಿದೆ. ಶಿವರಾತ್ರಿ ಆಗಮಿಸುತ್ತಿದೆ. ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಇಬ್ಬರಿಂದಲೂ ಕೂಡ ಗಸ್ತು ಹೆಚ್ಚಿಸಲು ತಿಳಿಸಿದ್ದೇನೆ. ಅರಣ್ಯಾಧಿಕಾರಿಗಳು ಚಿರತೆ ಸೆರೆಹಿಡಿಯಲು ಕೂಡ ಮುಂದಾಗಿದ್ದಾರೆ. ಭಕ್ತರ ಸುರಕ್ಷತೆಗೆ ಆದ್ಯತೆ ಕೊಡಲಾಗುವುದು ಎಂದು ಶಾಸಕ ಮಂಜುನಾಥ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಚನ್ನರಾಯಪಟ್ಟಣ | ಸೈಕಲ್‌ಗೆ ಕಾರು ಡಿಕ್ಕಿ – ಕಾಲೇಜು ವಿದ್ಯಾರ್ಥಿ ದುರ್ಮರಣ


