ಚಂಡೀಗಢ: ಪಂಜಾಬ್‌ನ (Punjab) ಮೋಗಾದ ಶಿವಸೇನೆಯ (Shiv Sena) ಜಿಲ್ಲಾಧ್ಯಕ್ಷ ಮಂಗತ್ ರಾಯ್ ಮಂಗಾ (Mangat Rai Manga) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅರುಣ್ ಅಲಿಯಾಸ್ ದೀಪು, ಅರುಣ್ ಅಲಿಯಾಸ್ ಸಿಂಘಾ ಮತ್ತು ರಾಜ್‌ವೀರ್ ಅಲಿಯಾಸ್ ಲಡ್ಡೊ ಎಂದು ಗುರುತಿಸಲಾಗಿದೆ. ಮೂವರು ಅಡಗುತಾಣಗಳಲ್ಲಿ ಅಡಗಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಪೊಲೀಸರು ಸುತ್ತುವರಿದಾಗ, ಪೊಲೀಸರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಸಹ ಪ್ರತಿದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ, ದೀಪು ಎಡಗಾಲಿಗೆ, ಸಿಂಘಾ ಬಲಗಾಲಿಗೆ ಗುಂಡು ತಗುಲಿದೆ. ರಾಜವೀರ್ ಸಹ ಗಾಯಗೊಂಡಿದ್ದಾನೆ. ಮೂವರು ಆರೋಪಿಗಳನ್ನು ತಕ್ಷಣ ಮಾಲೌಟ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಮಂಗತ್ ರಾಯ್ ಮಂಗಾ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಗುಂಡಿನ ದಾಳಿಯಲ್ಲಿ 11 ವರ್ಷದ ಬಾಲಕ ಸೇರಿದಂತೆ ಇತರ ಇಬ್ಬರು ಗಾಯಗೊಂಡಿದ್ದರು.
ಈ ಸಂಬಂಧ ಬಿಎನ್‌ಎಸ್ ಸೆಕ್ಷನ್ 103(1), 191(3), 190 ಮತ್ತು ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 25/27ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.