ನವದೆಹಲಿ: ಹಠಾತ್ ಬಿರುಗಾಳಿ ಸಹಿತ ಭಾರೀ ಮಳೆಗೆ ದೆಹಲಿಯ (Delhi) ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಮೂರು ಏರ್ ಇಂಡಿಯಾ (Air India) ವಿಮಾನಗಳು ಜಖಂಗೊಂಡಿವೆ.
ಬಿರುಗಾಳಿಗೆ ಸಿಕ್ಕಿ ರನ್‌ವೇನಲ್ಲಿದ್ದ ಏಣಿಗಳು ಮತ್ತು ಇತರ ತಾಂತ್ರಿಕ ಉಪಕರಣಗಳು ವಿಮಾನಗಳಿಗೆ ಡಿಕ್ಕಿಯಾದ ಪರಿಣಾಮ ಏರ್ ಇಂಡಿಯಾ ಸಂಸ್ಥೆಯ ಮೂರು ವಿಮಾನಗಳು ಜಖಂಗೊಂಡಿವೆ. ಇದನ್ನೂ ಓದಿ: KSRTC ಬಸ್ – ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
ಭಾನುವಾರ (ಜೂ.7) ಸಂಜೆ 4:40ರ ಸುಮಾರಿಗೆ ವಿಮಾನ ನಿಲ್ದಾಣದ ಟರ್ಮಿನಲ್ 2ರ ಬಳಿ ಘಟನೆ ನಡೆದಿದೆ. ಏಕಾಏಕಿ ಬೀಸಿದ ಬಿರುಗಾಳಿಯ ರಭಸಕ್ಕೆ ರನ್‌ವೇನಲ್ಲಿದ್ದ ಏಣಿಗಳು ಮತ್ತು ಇತರ ತಾಂತ್ರಿಕ ಉಪಕರಣಗಳು ವಿಮಾನಗಳಿಗೆ ಡಿಕ್ಕಿ ಹೊಡೆದಿವೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಜಖಂಗೊಂಡಿರುವ ಮೂರೂ J320 (ವಿಮಾನ ಸಂಖ್ಯೆ) ಮಾದರಿಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸದ್ಯ ಅವುಗಳ ರಿಪೇರಿ ಕೆಲಸ ನಡೆಯುತ್ತಿದೆ. ಇವುಗಳಲ್ಲಿ ಎರಡು ವಿಮಾನಗಳು ಕೆಲವೇ ದಿನಗಳಲ್ಲಿ ಪುನಃ ಹಾರಾಟಕ್ಕೆ ಸಿದ್ಧವಾಗಲಿವೆ. ಆದರೆ ಮತ್ತೊಂದು ವಿಮಾನ ತೀವ್ರ ಹಾನಿಗೊಳಗಾಗಿರುವುದರಿಂದ ಅದರ ರಿಪೇರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಹವಾಮಾನ ವೈಪರೀತ್ಯದ ಬಗ್ಗೆ ಯಾವುದೇ ಮುನ್ಸೂಚನೆ ಸಿಗದೇ ಇದ್ದುದರಿಂದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಘಟನೆ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.
ಬಿರುಗಾಳಿಯ ರಭಸಕ್ಕೆ ಏರ್ ಇಂಡಿಯಾ ಮಾತ್ರವಲ್ಲದೆ ಇತರ ಕೆಲವು ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೂ ಸಣ್ಣಪುಟ್ಟ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಗ್ರಾಹಕರಿಗೆ ಮತ್ತೊಂದು ಶಾಕ್ – ಪೆಟ್ರೋಲ್, ಗ್ಯಾಸ್ ಬಳಿಕ ಅಕ್ಕಿ ಬೆಲೆ ಗಗನಕ್ಕೆ
