ಗಾಂಧಿನಗರ: ಗುಜರಾತ್‍ನ (Gujarat) ಸೂರತ್ (Surat) ನಗರದ ಕೆಮಿಕಲ್ಸ್ ಫ್ಯಾಕ್ಟರಿ (Chemical Plant) ಒಂದರ ಟ್ಯಾಂಕ್‍ನಲ್ಲಿ ಸಂಗ್ರಹಿಸಿದ್ದ ರಾಸಾಯನಿಕ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 24 ಕಾರ್ಮಿಕರು ಗಾಯಗೊಂಡಿದ್ದಾರೆ.
ನಗರದ ಸಚಿನ್ ಜಿಐಡಿಸಿ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ರಾತ್ರಿ 2 ರಿಂದ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ದೊಡ್ಡ ತೊಟ್ಟಿಯೊಳಗೆ ಶೇಖರಿಸಲಾದ ರಾಸಾಯನಿಕಗಳ ಸೋರಿಕೆಯಿಂದ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಗಾಯಗೊಂಡ 24 ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಸ್ತು ವೇಳೆ ಹಫ್ತಾ ಪಡೆಯೋದು ಬಿಟ್ಟಿದ್ದರೆ ಕಂದಮ್ಮಗಳ ಮಾರಣಹೋಮ ತಪ್ಪುತಿತ್ತು: ಯತ್ನಾಳ್ ಕಿಡಿ
ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಮೂರು ಅಂತಸ್ತಿನ ಕಟ್ಟಡದಲ್ಲೂ ಬೆಂಕಿ ಆವರಿಸಿದೆ. ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ. ಘಟನೆ ನಡೆದಾಗ ಕಾರ್ಖಾನೆಯೊಳಗೆ ಎಷ್ಟು ಕಾರ್ಮಿಕರಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಸಾಯನಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಕಾರಣ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳ ಜನರು ಕೆಲಕಾಲ ಆತಂಕಕ್ಕೂ ಒಳಗಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಸುಗೂಸುಗಳ ಮಾರಾಟ ದಂಧೆ- ಕೊಂಡವರು, ಮಾರಾಟ ಮಾಡಿದವರ ಪತ್ತೆಗೆ ಸಿಸಿಬಿ ಶೋಧ