ಚೆನ್ನೈ: ಜೋಸೆಫ್ ವಿಜಯ್ (Joseph Vijay) ನೇತೃತ್ವದ ತಮಿಳುನಾಡು ಸರ್ಕಾರ (Tamilnadu Govt) ರಾಜ್ಯದಲ್ಲಿ ಮದ್ಯಪಾನದ ನಿಯಮಗಳನ್ನು ಕಠಿಣಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಮದ್ಯ ಖರೀದಿ ಅಥವಾ ಮಾರಾಟ ಮಾಡಲು ಕನಿಷ್ಠ 21 ವರ್ಷ ನಿಗದಿಪಡಿಸಿ ಮಹತ್ವದ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿಜಯ್ ಸರ್ಕಾರ ಈ ಕ್ರಮ ಜಾರಿಗೆ ತಂದಿದೆ. ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬಸ್ ನಿಲ್ದಾಣಗಳ ಸಮೀಪದಲ್ಲಿದ್ದ 717 TASMAC ಮದ್ಯದಂಗಡಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದ ಬೆನ್ನಲ್ಲೇ ಮತ್ತೊಂದು ಕ್ರಮವನ್ನು ಕೈಗೊಂಡಿದೆ. ಇದನ್ನೂ ಓದಿ: ದಳಪತಿ ವಿಜಯ್ ಪರ ವಿಶ್ವಾಸಮತ – ಸಿ.ವಿ ಷಣ್ಮುಗಂ ಸೇರಿ 25 AIADMK ಶಾಸಕರು ಪಕ್ಷದ ಹುದ್ದೆಯಿಂದ ವಜಾ
ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ (TASMAC ) ಅಂಗಡಿಗಳ ಸಿಬ್ಬಂದಿಗೆ ಗ್ರಾಹಕರ ವಯಸ್ಸನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ. ಅನುಮಾನ ಬಂದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿಗಳನ್ನು ಪರಿಶೀಲಿಸಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದೇ ವೇಳೆ ಮದ್ಯದಂಗಡಿಗಳ ಕಾರ್ಯಾಚರಣೆ ಸಮಯವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸುತ್ತಿರುವ (TASMAC) ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಮುಚ್ಚುವ ಪ್ರಸ್ತಾಪವೂ ಚರ್ಚೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಟಿಎಎಸ್‌ಎಮ್‌ಎಸಿ ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿದೆ. 2025ರಲ್ಲಿ 48,344 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ದಾಖಲಾಗಿದ್ದು, ಇದು ರಾಜ್ಯದ ಅತೀ ಹೆಚ್ಚು ಆದಾಯ ತರುವ ಇಲಾಖೆಗಳಲ್ಲೊಂದು. ಸರ್ಕಾರದ ಆದೇಶದಂತೆ ದೇವಾಲಯಗಳ ಬಳಿ ಇರುವ 276 ಅಂಗಡಿಗಳು, ಶಿಕ್ಷಣ ಸಂಸ್ಥೆಗಳ ಬಳಿ ಇರುವ 186 ಅಂಗಡಿಗಳು ಹಾಗೂ ಬಸ್ ನಿಲ್ದಾಣಗಳ ಸಮೀಪದ 255 ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ಮುಚ್ಚಲಾಗುತ್ತದೆ. ಇದರಿಂದ ರಾಜ್ಯದ ಒಟ್ಟು ಟಿಎಎಸ್‌ಎಮ್‌ಎಸಿ ಅಂಗಡಿಗಳ ಸಂಖ್ಯೆ 4,048ಕ್ಕೆ ಇಳಿಯಲಿದೆ.
ಸಾರ್ವಜನಿಕ ಆರೋಗ್ಯ ಮತ್ತು ಯುವಜನರಲ್ಲಿ ಮಾದಕ ವ್ಯಸನ ತಡೆಯುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಜಯ್ ಅವರ ಪಕ್ಷ ಟಿವಿಕೆ ಚುನಾವಣಾ ಪ್ರಣಾಳಿಕೆಯಲ್ಲಿ ಮಾದಕ ವಸ್ತು ಮುಕ್ತ ತಮಿಳುನಾಡು ನಿರ್ಮಿಸುವ ಭರವಸೆ ನೀಡಿತ್ತು.ಇದನ್ನೂ ಓದಿ: ಎಣ್ಣೆ ಕಿಕ್ ಇಳಿಸಿದ ವಿಜಯ್ – ದಳಪತಿ ನಿರ್ಧಾರಕ್ಕೆ ಸೀಟಿ ಊದಿದ ತಮಿಳುನಾಡು ಮಹಿಳೆಯರು

