ನವದೆಹಲಿ: ಸಂಸತ್ತಿನಲ್ಲಿ (Parliament) ಅಶಿಸ್ತು ತೋರಿದವರನ್ನು ಅಮಾನತು ಮಾಡುವ ಪ್ರಕ್ರಿಯೆ ಮುಂದುವರಿದಿದ್ದು, ಇಂದು ಮತ್ತೆ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದೆ.
ಕೇರಳದ ಥಾಮಸ್ ಚಾಜಿಕಾಡನ್ (Thomas Chazhikadan) ಮತ್ತು ಎಎಮ್ ಆರಿಫ್ (AM Ariff) ಅಮಾನತಾದ ಸಂಸದರು. ಚಾಜಿಕಡನ್ ಕೇರಳ ಕಾಂಗ್ರೆಸ್ (ಎಂ) ಮತ್ತು ಆರಿಫ್ ಸಿಪಿಎಂ (CPM) ಪಕ್ಷದವರಾಗಿದ್ದಾರೆ. ಪ್ಲೇಕಾರ್ಡ್‍ಗಳನ್ನು ಪ್ರದರ್ಶಿಸಿದ ಮತ್ತು ಸದನದ ಬಾವಿಗೆ ಪ್ರವೇಶಿಸಿದ್ದಕ್ಕಾಗಿ ಈ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.
- Advertisement
ಚಳಿಗಾಲದ ಅಧಿವೇಶನ (Winter Session) ಶುಕ್ರವಾರ (ಡಿಸೆಂಬರ್ 22)ದಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ ಒಟ್ಟು 143 ಮಂದಿ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ. ಡಿಸೆಂಬರ್ 4 ರಂದು ಆರಂಭವಾದ ಅಧಿವೇಶನದಲ್ಲಿ ಡಿಸೆಂಬರ್ 14 ರಂದು 14 ಸಂಸದರು, ಸೋಮವಾರ 78, ಮಂಗಳವಾರ 49 ಮತ್ತು ಇಂದು ಇನ್ನೂ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಅಮಾನತಾದ ಸಂಸದರು ಸಂಸತ್ತಿನ ಮೊಗಸಾಲೆ, ಗ್ಯಾಲರಿಗೆ ಬರುವಂತಿಲ್ಲ: ಸುತ್ತೋಲೆ
- Advertisement
ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಹೇಳಿಕೆ ನೀಡುವಂತೆ ಒತ್ತಾಯಿಸಿ ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಕಲಾಪಕ್ಕೆ ಅಡ್ಡಿಪಡಿಸಿದ ಮತ್ತು ಘೋಷಣೆಗಳನ್ನು ಎಬ್ಬಿಸಿದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಯಿತು. ಮತ್ತೊಂದೆಡೆ ಸದನಗಳಲ್ಲಿ ಅಧ್ಯಕ್ಷರ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸದರನ್ನು ಅಮಾನತುಗೊಳಿಸಲಾಗಿದೆ.