ನವದೆಹಲಿ: ಕಾಂಗ್ರೆಸ್ ಅವಧಿಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ದೇಶದ ಜನ ಮುಗ್ಧರು. ಜನ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎಂದು ಭಾವಿಸಿದ್ದಾರೆ. ಆದರೆ ಈ ಹಿಂದೆ 15 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಆದರೆ ಕಾಂಗ್ರೆಸ್ ಇದನ್ನು ಯಾವತ್ತೂ ಹೇಳಿಕೊಂಡಿರಲಿಲ್ಲ ಎಂದು ತಿಳಿಸಿದರು.
ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಅದಕ್ಕೆ ಹೆಚ್ಚು ಪ್ರಚಾರ ಕೊಡುವುದು ಸರಿಯಲ್ಲ ಎಂದು ಗೆಹ್ಲೋಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋದಿ ಬಂದ ನಂತರ ಭಾರತದಲ್ಲಿ ಉಪಗ್ರಹ ಉಡಾವಣೆಯಾಗುತ್ತಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಇಂದಿರಾ ಗಾಂಧಿ ಅವಧಿಯಲ್ಲಿ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು ಎಂದು ತಿಳಿಸಿದರು.
ನೆಹರು ಅವರು ಸ್ವಾತಂತ್ರ್ಯದ ಅವಧಿಯಲ್ಲಿ 12 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಆದರೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ನವರು ನೆಹರು ವಂಶದ ವಿರುದ್ಧ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ ಎಂದು ಕಿಡಿಕಾರಿದರು.
ನರೇಂದ್ರ ಮೋದಿ ಅವರು ಬಾಲಿವುಡ್ ನಲ್ಲಿ ನಟನಾಗಬಹುದು. 2014ರ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಬಿಜೆಪಿ ಮರೆತಿದೆ. ಕಪ್ಪುಹಣ ತರಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ಮೇಕ್ ಇನ್ ಇಂಡಿಯಾ ಪೇಪರ್ ನಲ್ಲಿ ಮಾತ್ರ ಇದೆ. ಸ್ಮಾರ್ಟ್‍ಸಿಟಿಯನ್ನು ಜನ ನೋಡಿಲ್ಲ ಎಂದು ಗೆಹ್ಲೋಟ್ ದೂರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv



