ಬೆಂಗಳೂರು: ಹಾಸಿಗೆ ಹಿಡಿದಿದ್ದ ತಾಯಿ (Mother) ಮಲಗಿರಬೇಕು ಅಂತಾ ತನ್ನ ತಾಯಿಯ ಹೆಣದ ಬಳಿಯೇ ಮಗ ಎರಡು ದಿನ ಮಲಗಿದ್ದ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.
ಮೃತದೇಹ ವಾಸನೆ ಬರೋದಕ್ಕೆ ಶುರುವಾದಾಗ ಅಕ್ಕಪಕ್ಕದವರನ್ನ ಕರೆದು ಹುಡುಗ ತೋರಿಸಿದ್ದಾನೆ. ಈ ವೇಳೆ ತಾಯಿ ಅಣ್ಣಮ್ಮ ಸತ್ತಿರೋದು ಗೊತ್ತಾಗಿದೆ.
ಏನಿದು ಘಟನೆ..?: ಇಳಂಗೋವನ್ ಹಾಗೂ ಅಣ್ಣಮ್ಮ ದಂಪತಿ ಆರ್.ಟಿ.ನಗರ (RT Nagar Police Station) ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗಂಗಾನಗರ ಐದನೇ ಕ್ರಾಸ್ ನಲ್ಲಿ ಸಣ್ಣದೊಂದು ಸ್ವಂತ ಸೀಟಿನ ಮನೆಯಲ್ಲಿ ವಾಸವಿದ್ರು. ದಂಪತಿಗೆ 14 ವರ್ಷದ ಸೂರ್ಯ ಅನ್ನೊ ಮಗ ಇದ್ದಾನೆ. ಸುಖವಾಗಿದ್ದ ಸಂಸಾರದಲ್ಲಿ ಅನಾರೋಗ್ಯ ಅನ್ನೋದು ಇಡೀ ಕುಟುಂಬವನ್ನೇ ಕಾಡಿತ್ತು. ಅಷ್ಟೇ ಅಲ್ಲದೆ ಹೃದಯ ವಿದ್ರಾವಕ ಘಟನೆಗೂ ಸಾಕ್ಷಿಯಾಗಿದೆ.
ಎಂಟು ತಿಂಗಳ ಹಿಂದಷ್ಟೇ ಪತಿ ಇಳಂಗೋವನ್ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರು. ಅಂದಿನಿಂದ ತಾಯಿ ಮತ್ತು 14 ವರ್ಷದ ಮಗ ಇಬ್ಬರೇ ಮನೆಯಲ್ಲಿದ್ರು. ತಾಯಿಗೆ ಸ್ಟ್ರೋಕ್ ಆಗಿ ಮಾತು ಕೂಡ ಬಂದ್ ಆಗಿತ್ತು. ತಂದೆಯ ಸ್ನೇಹಿತರ ನೆರವಿನೊಂದಿಗೆ ಅಮ್ಮ, ಮಗ ಬದುಕು ಕಟ್ಟಿಕೊಂಡಿದ್ರು. 14 ವರ್ಷದ ಮಗನೇ ಅಡುಗೆ ಮಾಡಿ ಹಾಕ್ತಿದ್ದ. ಅಲ್ಲದೇ ಹೆಚ್ಚಾಗಿ ಮನೆಯಿಂದ ಹೊರಗೂ ಬರ್ತಾ ಇರಲಿಲ್ಲ. ಇದನ್ನೂ ಓದಿ: ಎಷ್ಟೇ ಪೌಡರ್ ಹಾಕಿದ್ರೂ ನೀನು ಬೆಳ್ಳಗಾಗಲ್ಲ – ಪತ್ನಿಯ ಕತ್ತು ಹಿಸುಕಿ ಕೊಂದ ಪತಿ
ಫೆಬ್ರವರಿ 26 ರಂದು ರಾತ್ರಿ ಮಲಗಿದ್ದಲ್ಲಿಯೇ ತಾಯಿ ಅಣ್ಣಮ್ಮ ಮೃತಪಟ್ಟಿದ್ದಾಳೆ. ಈ ವಿಚಾರ ಮಗ ಸೂರ್ಯನಿಗೆ ತಿಳಿಯಿತೊ ಇಲ್ವೋ ಗೊತ್ತಿಲ್ಲ. ಆದರೆ ತಾಯಿ ಜೊತೆಗೆನೇ ಎರಡು ಕಾಲ ಕಳೆದಿದ್ದಾನೆ. ಮನೆಯಿಂದ ಹೊರಗೆ ಬರ್ತಿದ್ದ ಆತ, ಊಟ ತಿಂಡಿ ತೆಗೆದುಕೊಂಡು ಮತ್ತೆ ಮನೆ ಸೇರ್ಕೊತಿದ್ದ. ತಾಯಿ ಪಕ್ಕದಲ್ಲೇ ಮಲಗಿಕೊಂಡಿದ್ದ. ಹೀಗಿರ್ಬೇಕಾದ್ರೆ ಫೆಬ್ರವರಿ 28 ರಂದು ಸ್ವತಃ ಮಗನೇ ತನ್ನ ತಂದೆಯ ಸ್ನೇಹಿತರಿಗೆ ತಾಯಿ ಮಾತಾಡ್ತಿಲ್ಲ ಅಂತಾ ಹೇಳಿದ್ದಾನೆ. ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.
ಘಟನೆಯಿಂದ ಏರಿಯಾ ಜನರೆಲ್ಲ ಶಾಕ್ ಆಗಿದ್ದಾರೆ. ತಾಯಿಯ ಮೇಲಿನ ಅತಿಯಾದ ಪ್ರೀತಿಯೋ ಅಥವಾ ಸತ್ತಿದ್ದಾಳೆ ಅನ್ನೋ ವಿಚಾರ ಆ ಮಗನಿಗೆ ಗೊತ್ತಾಗ್ಲಿಲ್ವೊ ಏನೋ. ಎರಡು ದಿನ ಮೃತದೇಹದ ಜೊತೆಗೆ ಕಳೆದಿದ್ದು ನಿಜಕ್ಕೂ ನಾಗರೀಕ ಸಮಾಜದ ಮನಕಲಕುವಂತಿದೆ.