ಬೆಂಗಳೂರು: ಸಾರ್ವತ್ರಿಕ ಚುನಾವಣೆಗೆ ಹೋಗಬೇಕೆಂದರೆ ಹೊಸ ಮುಖಗಳು ಬೇಕು. ಹೀಗಾಗಿ ಹೊಸ ಸಚಿವರಿಗೆ ಅವಕಾಶ ನೀಡಲು ಸಚಿವ ಸಂಪುಟವನ್ನು ಪುನರ್ ರಚನೆ ಮಾಡಬೇಕು ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಹಾಲಿ ಸಚಿವರನ್ನಿಟ್ಟುಕೊಂಡು ಹೋದರೆ ಮುಂದಿನ ಸಾರ್ವತ್ರಿಕ ಚುನಾವಣೆ ಗೆಲ್ಲುವುದು ಕಷ್ಟ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹಾಲಿ ಸಚಿವರಿಗೆ ಎಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ. ಉಪಚುನಾವಣೆ ಸಹಜವಾಗಿ ಸರ್ಕಾರದ ಪರವಾಗಿ ಬರುತ್ತದೆ. ಉಪಚುನಾವಣೆಗಳನ್ನು ಸರ್ಕಾರಗಳು ನಡೆಸುತ್ತವೆ. ಆದರೆ ಸಾರ್ವತ್ರಿಕ ಚುನಾವಣೆ ಪಕ್ಷ ನಡೆಸುತ್ತದೆ. ಹೀಗಾಗಿ ಹೊಸ ಮುಖಗಳು ಸಂಪುಟದೊಂದಿಗೆ ಹೋಗಬೇಕು. ಸಾರ್ವತ್ರಿಕ ಚುನಾವಣೆ ಗೆಲ್ಲಬೇಕಾದರೆ ಸಂಪುಟ ಪುನರ್ ರಚನೆಯಾಗಬೇಕಾಗುತ್ತದೆ ಎಂದು ವಿಶ್ವನಾಥ್ ಹೇಳಿದ್ದಾರೆ.
Advertisement
Advertisement
ದೆಹಲಿಗೆ ತೆರಳಿದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ದೆಹಲಿಗೆ ಹೋಗಿರಲಿಲ್ಲ, ಉಜ್ಜೈನಿಗೆ ಹೋಗಿದ್ದೆ. ದೆಹಲಿಯಿಂದ ಕೋಲ್ಕತ್ತಾಗೆ ಹೋಗಿದ್ದೆ. ದೆಹಲಿ ಮಾರ್ಗದಲ್ಲಿ ಮಹಾಕಾಳಿ ದರ್ಶನಕ್ಕೆ ಹೋಗಿದ್ದೆ. ಆರ್.ಶಂಕರ್ ದೆಹಲಿಗೆ ಹೋಗಿದ್ದು ಗೊತ್ತಿಲ್ಲ. ನಾನು ಅವರ ಜೊತೆ ಹೋಗಲಿಲ್ಲ. ಮಹಾಕಾಳಿಗೆ ನನಗೆ ಒಳ್ಳೆಯದು ಮಾಡುವಂತೆ ಕೇಳಿಕೊಂಡಿದ್ದೇನೆ. ದೇವರಲ್ಲಿ ಬೇಡಿಕೊಳ್ಳೋದು ದೇಶಕ್ಕೆ ಒಳ್ಳೆಯದು ಮಾಡಲಿ ಅಂತ. ನಾವು ರಾಜಕಾರಣಿಗಳು ನಮಗೂ ಒಳ್ಳೆಯದು ಮಾಡು ಎಂದು ಸ್ವಾರ್ಥಕ್ಕೂ ಬೇಡಿಕೊಳ್ಳುತ್ತೇವೆ. ನಾನು ಸಚಿವನಾಗುವ ವಿಶ್ವಾಸ ಇದೆ. ನನ್ನ ಹಿರಿತನ, ತ್ಯಾಗಕ್ಕೆ ಬೆಲೆ ಸಿಗುತ್ತೆ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಶಾಸಕ ರೇಣುಕಾಚಾರ್ಯ ಮಾತನಾಡಿ, ಸಚಿವ ಸ್ಥಾನ ನೀಡಿ ಎಂದು ಒತ್ತಡ ಹಾಕಲ್ಲ. ಸಚಿವ ಸ್ಥಾನ ನೀಡಿದರೆ ಸಂತೋಷ. ಇಲ್ಲದಿದ್ದರೆ ಪಕ್ಷದ ಕೆಲಸ ಮಾಡುತ್ತೇವೆ. ನಮ್ಮ ಆದ್ಯತೆ ಕ್ಷೇತ್ರದ ಅಭಿವೃದ್ಧಿ. ಕ್ಷೇತ್ರದ ಅಭಿವೃದ್ಧಿ ಸಂಬಂಧ ಚರ್ಚೆಗೆ ಇಲ್ಲಿ ಸೇರಿದ್ದೆವು. ಇಲ್ಲಿ ಕಾರ್ಯ ತಂತ್ರ, ಒತ್ತಡ ಯಾವ ತಂತ್ರವೂ ಮಾಡಿಲ್ಲ. ರಮೇಶ್ ಜಾರಕಿಹೊಳಿ ಬೃಹತ್ ನೀರಾವರಿ ಸಚಿವರು. ಹೀಗಾಗಿ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದ್ದೇವೆ. ಇಲ್ಲೇ ಸಂತೃಪ್ತಿ ಯಾಗಿ ಊಟ ಮಾಡಿದೆವು. ಎಲ್ಲವನ್ನೂ ಭಗವಂತನ ಮೇಲೆ ಹಾಕಿ ಹೊರಟಿದ್ದೇವೆ ಎಂದರು.
ಈ ಕುರಿತು ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದು, ರೇಣುಕಾಚಾರ್ಯ, ನಿರಾಣಿ, ಶಿವರಾಜಪಾಟೀಲ್, ಬೆಳ್ಳಿಪ್ರಕಾಶ್ ಜತೆ ಸಿಎಂ ಭೇಟಿ ಮಾಡಿದ್ದೆವು. ಈಗ ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೆ ಸೇರಿದ್ದೆವು. ಸಚಿವ ಸ್ಥಾನದ ಬೇಡಿಕೆಯಿಟ್ಟಿಲ್ಲ, ನಾಳೆ ಸಚಿವ ಸಂಪುಟ ಸಭೆ ಇದೆ. ಕೆಲ ಕೆಲಸಗಳ ಬಗ್ಗೆ ಮಾತನಾಡಲು ಬಂದಿದ್ದವು. ಸಚಿವ ಸಂಪುಟದ ಬಗ್ಗೆ ನಾವು ಹೆಚ್ಚು ಒತ್ತುಕೊಟ್ಟಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನ ಕೊಟ್ಟರೆ ಬೇಡ ಎನ್ನುವ ದೊಡ್ಡ ಗುಣವಿಲ್ಲ, ಸಚಿವ ಸ್ಥಾನಕ್ಕೆ ಈಗಾಗಲೇ ಅಪ್ಲಿಕೇಶನ್ ಕೊಟ್ಟಿದ್ದು, ಸಿಎಂ ವಿವೇಚನೆಗೆ ಬಿಡಲಾಗಿದೆ. ಇಂದು ಬೆಳಗ್ಗೆ ನಾವು ಆರು ಶಾಸಕರು ಸಿಎಂ ಭೇಟಿ ಮಾಡಿದ್ದೆವು. ಈಗಾಗಲೇ ಸಚಿವ ಸ್ಥಾನಕ್ಕೆ ಅರ್ಜಿ ಹಾಕಿದ್ದೇವೆ. ಆದರೆ ಸಿಎಂ ಮತ್ತು ಸರ್ಕಾರದ ಮೇಲೆ ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿಲ್ಲ. ನಾಳೆ ಕ್ಯಾಬಿನೆಟ್ ಸಭೆ ಇದೆ. ನೀರಾವರಿ ಯೋಜನೆಗಳ ಬಗ್ಗೆ ಕೆಲ ವಿಚಾರ ಚರ್ಚೆ ಮಾಡಿದ್ದೇವೆ. ಬೇರೆ ಉದ್ದೇಶ ಏನೂ ಇಲ್ಲ, ಕೊರೊನಾದಿಂದ ರಾಜ್ಯದ ಸ್ಥಿತಿ ಸರಿಯಿಲ್ಲ. ಇಂಥ ಸಂದರ್ಭದಲ್ಲಿ ನಾವು ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿಲ್ಲ. ಕೊರೊನಾಗೂ ಮುಂಚೆ ಕೆಲ ಸಚಿವರನ್ನು ಕೈಬಿಡಿ ಎಂದು ಸಿಎಂಗೆ ಮನವಿ ಮಾಡಿದ್ದೆವು. ಆದರೆ ಈಗ ಪರಿಸ್ಥಿತಿ ಬೇರೆ ಇದೆ. ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಿಎಂ ಭೇಟಿ ಮಾಡಿದ್ದಾಗ ಬದಲಾವಣೆ ಮಾಡಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ರಾಜುಗೌಡ ತಿರುಗೇಟು ನೀಡಿದ್ದು, ಸಿಎಂ ಬದಲಾವಣೆ ಇಲ್ಲ. ಮುಂದಿನ ಅವಧಿಯವರೆಗೂ ಯಡಿಯೂರಪ್ಪ ಸಿಎಂ ಎಂದು ಪ್ರಧಾನಿ ಮೋದಿ, ಜೆ.ಪಿ.ನಡ್ಡಾ ಹೇಳಿದ್ದಾರೆ. ಯಡಿಯೂರಪ್ಪ ಅವರೇ ಮುಂದಿನ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ. ಕೆಲವು ಸಚಿವರನ್ನು ತೆಗೆಯುತ್ತೇವೆ ಎಂದು ಸಿಎಂ ಹೇಳಿಕೆ ನೀಡಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಉಪಚುನಾವಣೆ ಬಳಿಕ ಎಲ್ಲರೂ ಕೂಡಿ ಸಂತೋಷದಿಂದ ಊಟ ಮಾಡಿದೆವು. ನಮ್ಮನೆಗೆ ಎಲ್ಲರೂ ಬಂದಿದ್ದರು. ಇದರಲ್ಲಿ ವಿಶೇಷತೆ ಏನೂ ಇಲ್ಲ. ಸಂಪುಟ ವಿಸ್ತರಣೆ ಸಿಎಂ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ಅವರ ನಿರ್ಧಾರಕ್ಕೆ ನಾವು ಬದ್ಧ, ಉಳಿದ ವಲಸಿಗರಿಗೆ ಸಚಿವ ಸ್ಥಾನ ಸಿಗುವ ಕುರಿತು ನಾನು ಏನೂ ಹೇಳಕ್ಕಾಗಲ್ಲ. ಇದುವರೆಗೆ ನಾವು ಹೇಳಿದ್ದೆಲ್ಲ ಆಗಿದೆ. ನಾನೊಬ್ಬ ಸಾಮಾನ್ಯ ಮನುಷ್ಯ, ನಾನು ಮತ್ತೊಂದು ಪವರ್ ಸೆಂಟರ್ ಅಲ್ಲ. ನಾನಾಯ್ತು, ನನ್ನ ಇಲಾಖೆ ಕೆಲಸ ಆಯ್ತು ಎಂದು ಕೆಲಸ ಮಾಡುತ್ತಿದ್ದೇನೆ ಎಂದರು.