ಮೈಸೂರು: ಸರ್ಕಾರಿ ಆಸ್ಪತ್ರೆ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಎಂದ ಕೂಡಲೇ ಜನರು ಅಲ್ಲಿ ಸ್ಚಚ್ಚತೆ ಇರಲ್ಲ. ಅಲ್ಲಿ ಚಿಕಿತ್ಸೆ ವಿಳಂಬ. ಅಲ್ಲಿ ವೈದ್ಯರ ಸೇವೆ ಸರಿ ಇರಲ್ಲ ಎಂಬ ನೂರು ದೂರು ಹೇಳುತ್ತಾರೆ. ಆದರೆ ಮೈಸೂರಿನ ಒಂದು ಸಮುದಾಯ ಆರೋಗ್ಯ ಕೇಂದ್ರ ಈ ಎಲ್ಲಾ ದೂರುಗಳಿಂದ ಬಹು ದೂರ ಇದ್ದು ಸ್ವಚ್ಚತೆ, ಚಿಕಿತ್ಸೆ, ವೈದ್ಯರ ಸೇವೆ ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಮಾದರಿಯಾಗಿದೆ.
ಹೀಗಾಗಿ ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಜಯನಗರ ಆಸ್ಪತ್ರೆ ಎಂದು ಖ್ಯಾತಿ ಪಡೆದಿರುವ ಮೈಸೂರಿನ ಜಯ ನಗರದ ನಗರ ಸಮುದಾಯ ಆರೋಗ್ಯ ಕೇಂದ್ರ ಈಗ ರಾಜ್ಯದ ನಂಬರ್ ಒನ್ ಆರೋಗ್ಯ ಕೇಂದ್ರ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಚ್ಛ ಭಾರತ ಯೋಜನೆಯ ಅಡಿ ನೀಡುವ ಕಾಯಕಲ್ಪ ಪ್ರಶಸ್ತಿಯನ್ನು ಈ ಕೇಂದ್ರಕ್ಕೆ ನೀಡಿದೆ.
ಸ್ವಚ್ಚತೆ, ಸುಸಜ್ಜಿತ ವ್ಯವಸ್ಥೆ ಹಾಗೂ ರೋಗಿಗಳ ಪ್ರತಿಕ್ರಿಯೆ ಎಲ್ಲದರಲ್ಲೂ ಈ ಆಸತ್ರೆ 98.5 ಅಂಕ ಗಳಿಸುವ ಮೂಲಕ ರಾಜ್ಯದ ನಂಬರ್ ಒನ್ ಸಮುದಾಯ ಕೇಂದ್ರ ಎಂಬ ಪಟ್ಟ ಗಿಟ್ಟಿಸಿದೆ. ರಾಷ್ಟ್ರೀಯ ಗುಣಮಟ್ಟ ಮೌಲ್ಯಮಾಪನ ಸಮಿತಿ ಇಲ್ಲಿಗೆ ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲಿಸಿತ್ತು.
ರಾಜ್ಯದ 28 ನಗರ ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ ಮೈಸೂರಿನ ಜಯನಗರದ ನಗರ ಸಮುದಾಯ ಆರೋಗ್ಯ ಕೇಂದಕ್ಕೆ ಮೊದಲ ಪ್ರಶಸ್ತಿ ಲಭಿಸಿದೆ. ಇದಿಷ್ಟೆ ಅಲ್ಲದೆ UNIDO (ಯುನೈಟೆಡ್ ನೇಷನ್ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ ಆರ್ಗನೈಜೇಷನ್) ವತಿಯಿಂದಲೂ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯಲ್ಲಿಯೂ ಜಯ ನಗರ ಆಸ್ಪತ್ರೆ ಅತ್ಯುತ್ತಮ ಪ್ರಶಸ್ತಿ ಗಳಿಸಿದ್ದು 10,000 ರೂ.ಗಳ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 30 ಬೆಡ್ ಸಾಮಥ್ರ್ಯದ ಜಯನಗರ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು 8000 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗರ್ಭಿಣಿಯರು ಮತ್ತು ಮಕ್ಕಳಿಗೆ ಉತ್ತಮ ಚಿಕಿತ್ಸೆ ಇಲ್ಲಿ ದೊರಕುತ್ತಿದೆ.