ಬೆಂಗಳೂರು: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಿವಾದಾತ್ಮಕ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ಬಿಎಸ್‍ವೈ ಸರ್ಕಾರ ನಿರ್ಧರಿಸಿದೆ.
ಇಂದಿನ ಸಂಪುಟ ಸಭೆಯಲ್ಲಿ ವಿಧೇಯಕ ಸುಗ್ರಿವಾಜ್ಞೆ ಹೊರಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಾಳೆ ವಿಧೇಯಕದ ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಿದ್ದೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿದ್ದು, ಇದಕ್ಕೆ ಇದೀಗ ಹೊಸ ರೂಪ ಕೊಡಲಾಗಿದೆ. ದಂಡ ಹೆಚ್ಚಳ ಸೇರಿದಂತೆ ಕೆಲಸ ಬದಲಾವಣೆ ಮಾಡಲಾಗಿದೆ. ಕೇವಲ ರಾಜಕಾರಣ ಮಾಡುವ ಸಲುವಾಗಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಇದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದರು.
ಈ ಬೆನ್ನಲ್ಲೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರದ ನಿರ್ಧಾರವನ್ನು ಖಂಡಿಸುವ ಜೊತೆಗೆ ತಮ್ಮದೆ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು. ನಾನು ದನದ ಮಾಂಸ ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು, ಅದನ್ನ ಕೇಳೋಕೆ ನೀನ್ಯಾರು ಎಂದು ಸದನದಲ್ಲೇ ಕೇಳಿದ್ದೇನೆ. ನಮ್ಮವರು ಇದನ್ನ ಗಟ್ಟಿಯಾಗಿ ಹೇಳಲ್ಲ. ಕೆಲವು ವಿಚಾರಗಳ ಬಗ್ಗೆ ನಮಗೆ ಮೊದಲು ಸ್ಪಷ್ಟತೆ ಇರಬೇಕು ಎಂದು ಕ್ಲಾಸ್ ತೆಗೆದುಕೊಂಡರು.
ಗೋ ಮಾತೆನಾ ನಾವು ಪೂಜಿಸುತ್ತೇವೆ ಸರಿ. ವಯಸ್ಸಾದ ಹಸು, ಗಂಡು ಕರು ಏನು ಮಾಡೋದು ಹೇಳಿ. ಬೇರೆಯವರು ಏನು ಅಂದ್ಕೋತಾರೆ ಅಂತಾ ನಮ್ಮವರು ಮೌನಕ್ಕೆ ಶರಣಾಗುತ್ತಾರೆ. ಇದನ್ನ ಮೊದಲು ನಾವು ಬಿಡಬೇಕು. ನಮ್ಮ ಕಾರ್ಯಕರ್ತರು ಇದರ ಬಗ್ಗೆ ಜೋರಾಗಿ ಮಾತನಾಡಬೇಕು. ಆಗ ಮಾತ್ರ ಬಿಜೆಪಿ ಸುಮ್ಮನಾಗುತ್ತೆ ಎಂದು ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.