ಬೆಂಗಳೂರು: ಸಿಎಂ ಸ್ಥಾನ ಕೈ ತಪ್ಪಿದ ಹತಾಶೆಯಿಂದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಟೀಕಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ.ಟಿ.ರವಿ, ಸಚಿವ ಈಶ್ವರಪ್ಪ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಿಎಂ ಸ್ಥಾನದ ರೇಸ್ ನಲ್ಲಿ ಇದ್ದರು. ಬಸವರಾಜ ಬೊಮ್ಮಯಿ ಸಿಎಂ ಆದ ನಂತರ ಈ ಮೂವರಿಗೂ ಹತಾಶೆಯಾಗಿದೆ. ನೆಹರು ಬಗ್ಗೆ ತುಚ್ಛವಾಗಿ ಮಾತನಾಡಿದರು. ಸಿ.ಟಿ.ರವಿ ಗಾಜಿನ ಮನೆಯಲ್ಲಿ ಕೂತು ಕಲ್ಲು ಬೀಸುವ ಕೆಲಸ ಮಾಡಿದರು. ಅವರು ಮಾತನಾಡಿದಕ್ಕೆ ನಾವು ಮರು ಹೇಳಿಕೆ ಕೊಟ್ಟರೆ ಕೇಸ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಜೈಲಿಗೆ ಹೋಗಿ ಬಂದರೆ ಕಾಂಗ್ರೆಸ್ ನಲ್ಲಿ ಪ್ರಮೋಷನ್ ಸಿಗುತ್ತೆ ಎಂದು ಮತ್ತೊಂದು ಎಡವಟ್ಟು ಹೇಳಿಕೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಸರ್ಕಾರದ ಆಸ್ತಿ ನಿರ್ವಹಣೆ ಹೆಸರಲ್ಲಿ ಬಿಳಿ ಆನೆ ಸಾಕುವ ಆಸಕ್ತಿ ಇಲ್ಲ: ಸಿ.ಟಿ.ರವಿ
ಸದನದಲ್ಲಿ ನೀಲಿ ಚಿತ್ರ ನೋಡಿದ ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿಯವರು ಡಿಸಿಎಂ ಮಾಡಿದರು. 2002 ರಿಂದ 2007 ರವರೆಗೂ ಮೋದಿ ನೇತೃತ್ವದ ಸರ್ಕಾರ ಎನ್‍ಕೌಂಟರ್ ಮಾಡಿಸಿ ಸಾಯಿಸಿದರು. ಪಾಕಿಸ್ತಾನದ ಉಗ್ರವಾದಿಗಳು ಮೋದಿ ಟಾರ್ಗೆಟ್ ಮಾಡುತ್ತಿದ್ದಾರೆಂದು 5 ವರ್ಷದಲ್ಲಿ 17 ಜನರನ್ನು ಎನ್‍ಕೌಂಟರ್ ಮಾಡಿದ್ದಾರೆ. ಗುಜರಾತ್ ಒಳಗಡೆ ಅಮಿತ್ ಶಾಗೆ ಎಂಟ್ರಿ ಕೊಡಲಿಲ್ಲ. ಇಂತಹವರನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡಿಕೊಂಡು ಸಿ.ಟಿ.ರವಿ ಮಾತನಾಡುತ್ತಿದ್ದಾರೆ ಎಂದರು.
ಚುನಾವಣಾ ಪೂರ್ವದಲ್ಲಿ ಐಟಿ ಅವರು ಕಾಂಗ್ರೆಸ್ ನಾಯಕರ ಮನೆಗೆ ನುಗ್ಗುತ್ತಾರೆ. ಬಿಜೆಪಿ ರಹಿತ ಪಕ್ಷಗಳ ಮೇಲೆ ಐಟಿ ದಾಳಿಯಾಗುತ್ತದೆ. ಐಟಿ, ಇಡಿ, ಸಿಬಿಐ ಅಧಿಕಾರಿಗಳನ್ನು ಕಾಂಗ್ರೆಸ್ ನಾಯಕರ ಮೇಲೆ ಛೂ ಬಿಟ್ಟಿದ್ದಾರೆ. ಸಿಬಿಐ ನೋಟಿಸ್ ನನಗೂ ಬಂದಿತ್ತು. ಒಂದು ದಿನ ಪೂರ್ತಿ ವಿಚಾರಣೆಗೆ ಹೋಗಿದ್ದೆ ಎಂದೂ ಅವರು ಹೇಳಿದರು.
ಬಿ.ಎಸ್.ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಜನಾರ್ದನ ರೆಡ್ಡಿ, ಹರತಾಳು ಹಾಲಪ್ಪ ಜೈಲಿಗೆ ಹೋಗಿರಲಿಲ್ಲವೇ? ಸಿಟಿ ರವಿಯವರನ್ನು ಚಿಕ್ಕಮಗಳೂರಿನಲ್ಲಿ ಲೂಟಿ ಎಂದು ಕರೆಯುತ್ತಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಅಭ್ಯರ್ಥಿಗಳು ಇದ್ದರು. ಯತ್ನಾಳ್, ಸಿ.ಟಿ.ರವಿ, ಈಶ್ವರಪ್ಪ ಸಿಎಂ ಆಕಾಂಕ್ಷಿಯಾಗಿದ್ದರು. ಬೊಮ್ಮಾಯಿ ಆದ ಮೇಲೆ ಉಳಿದವರಿಗೆ ವಾಂತಿಯಾಗಿದೆ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಸಿಟಿ ರವಿ ತಲೆಯಲ್ಲಿ ಬುದ್ಧಿ ಇಟ್ಟುಕೊಂಡು ಮಾತನಾಡಬೇಕು. ಅಮಿತ್ ಶಾ, ಯಡಿಯೂರಪ್ಪ, ಅಶೋಕ್, ಹಾಲಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಇವರೆಲ್ಲ ಜೈಲಿಗೆ ಹೋಗಿದ್ದಾರೆ. ಯಡಿಯೂರಪ್ಪ ಅವರ ಅರ್ಧ ಸಂಪುಟ ಜೈಲಿನಲ್ಲಿತ್ತು. ಇದನ್ನು ತಿಳಿದುಕೊಂಡು ಮಾತನಾಡಿ ಎಂದು ಕಿಡಿಕಾರಿದರು.
ಸಿ.ಟಿ.ರವಿಯವರಿಗೆ ಸವಾಲು: ಇಂದಿರಾ, ನೆಹರು ಬಗ್ಗೆ ಮಾತನಾಡುತ್ತಿದ್ದೀರಿ. ಅವರ ಆಸ್ತಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀರಿ. ನಿಮಗೆ ಸಾವಿರ ಕೋಟಿ ಆಸ್ತಿ ಇದೆ. ಇದು ಎಲ್ಲಿಂದ ಬಂತು ಅಂತ ಜನರಿಗೆ ಹೇಳಿ. ನಮಗೂ ಎಲ್ಲಾ ಗೊತ್ತಿದೆ. ಹಾಗಾಗಿ ನೀವು ಮಾತನಾಡುವಾಗ ಎಚ್ಚರ ಇರಲಿ. ನೆಹರು, ಇಂದಿರಾಗೆ ನಿಮ್ಮ ತಂದೆ ಕೂಡ ಓಟ್ ಹಾಕಿದ್ದಾರೆ. ಹಾಗಾಗಿ ಗೌರವದಿಂದ ನಡೆದುಕೊಳ್ಳಿ. ಇಂದಲ್ಲ ನಾಳೆ ಸಿ.ಟಿ.ರವಿ ಸಿಎಂ ಆಗಬಹುದು. ಈಗಲೇ ಹತಾಶೆಯಿಂದ ಮಾತನಾಡಬಾರದು. ನಿಮ್ಮದೇ ನಾಯಕರೊಬ್ಬರು ನಿಮ್ಮ ಬಗ್ಗೆ ಮಾತನಾಡಿದ್ದರು. ರವಿಯವರದ್ದು ಎಲುಬಿಲ್ಲದ ನಾಲಿಗೆ ಎಂದು ನಮ್ಮ ಕಾರ್ಯಕರ್ತರು ಕೂಡ ಹೇಳುತ್ತಾರೆ. ನಿಮ್ಮದು ಬಚ್ಚಲಮನೆ ಚಪ್ಪಲಿ ನಾಲಿಗೆ, ನೀವು ಅದರಂತೆ ಮಾತನಾಡುತ್ತಿದ್ದೀರಿ ಎಂದು ರವಿ ವಿರುದ್ಧ ವ್ಯಂಗ್ಯವಾಡಿದರು.