ಧಾರವಾಡ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ಸಿಎಂ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಅವರನ್ನು ಭೇಟಿಯಾಗಿದ್ದಕ್ಕೆ ಜಿಲ್ಲಾಧಿಕಾರಿ ತಪಾಸಣೆಗೊಳಪಟ್ಟಿದ್ದಾರೆ. ಲೋಕಸಭಾ ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ, ಬೆಳಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ಸಿಎಂ ಅವರನ್ನು ಜಿಲ್ಲಾಧಿಕಾರಿ ಭೇಟಿ ಮಾಡಿದ್ದರು.
ಸಿಎಂ ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಹೆಚ್ಚು ಹೊತ್ತು ಇರಲಿಲ್ಲ. ಆಗ ಮಾಸ್ಕ್ ಹಾಕಿಕೊಂಡು, ಅಂತರ ಪಾಲಿಸಿದ್ದೇವೆ. ಈಗಷ್ಟೇ ನಾನು ಸಹ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೂ ಟೆಸ್ಟ್ ಮಾಡಿಸಿಕೊಳ್ಳಲು ಹೇಳಿದ್ದೇನೆ, ಯಾರೂ ಸಹ ಹತ್ತಿರ ಹೋಗಿರಲಿಲ್ಲ, ಆರು ಅಡಿ ಅಂತರದಲ್ಲೇ ಇದ್ವಿ ಎಂದು ಹೇಳಿದರು.