– ಅನಾಥಾಶ್ರಮ ಸೇರಿದ ಅಜ್ಜಿ
– ಮಕ್ಕಳಲ್ಲಿ 4 ಮಂದಿ ಸರ್ಕಾರಿ ನೌಕರರು
ರಾಯಚೂರು: ನಾಲ್ಕು ಜನ ಮಕ್ಕಳು, ಸರ್ಕಾರಿ ನೌಕರರಿರುವ ತಾಯಿ ಇಂದು ಅನಾಥವಾಗಿ ವೃದ್ಧಾಶ್ರಮ ಸೇರಿದ್ದಾರೆ. ಆಸ್ತಿ ಹಂಚಿಕೆಯಾದ ಮೇಲೆ ದುರುಳ ಮಕ್ಕಳು ಹೆತ್ತ ತಾಯಿಯನ್ನೇ ಮನೆಯಿಂದ ಹೊರದಬ್ಬಿದ್ದಾರೆ. ಕಳೆದ ಏಳು ತಿಂಗಳಿಂದ ಕೊರೊನಾ ಕೆಟ್ಟ ಸಂದರ್ಭದಲ್ಲಿಯೇ ಊರೂರು ಅಲೆದು ಹೊಟ್ಟೆ ತುಂಬಿಸಿಕೊಂಡ ಆರು ಮಕ್ಕಳ ತಾಯಿಯ ಕರುಳು ಹಿಂಡುವ ಕಥೆಯಿದು.
Advertisement
ಹೌದು. ಶಾವಂತ್ರಮ್ಮಗೆ ಒಟ್ಟು ಆರು ಜನ ಮಕ್ಕಳು. ಅದರಲ್ಲಿ ನಾಲ್ಕು ಜನ ಸರ್ಕಾರಿ ನೌಕರಿ ಮಾಡ್ತಾರೆ. ಶಿಕ್ಷಕರಾಗಿ, ಲೆಕ್ಚರ್ ಆಗಿ ಕೆಲಸ ಮಾಡ್ತಿದ್ದಾರೆ. ವಿದೇಶದಲ್ಲಿ ಮೊಮ್ಮಕ್ಕಳಿದ್ದಾರೆ. ಆದರೆ ಈಗ ಇವರ ಪಾಲಿಗೆ ಯಾರೂ ಇಲ್ಲಾ. ಹೀಗಾಗಿ ರಾಯಚೂರಿನ ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮದಲ್ಲಿ ಅಜ್ಜಿ ಆಶ್ರಯ ಪಡೆದಿದ್ದಾರೆ.
Advertisement
Advertisement
ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಅಜ್ಜಿ 7 ತಿಂಗಳಿಂದ ಊರೂರು ಅಲೆದಾಡಿ ಈಗ ಆಶ್ರಮ ಸೇರಿಕೊಂಡಿದ್ದಾರೆ. ಆಸ್ತಿ ಎಲ್ಲಾ ಹಂಚಿಕೆ ಮಾಡಿಕೊಂಡ ಮೇಲೆ ಮಕ್ಕಳು ತಾಯಿಯನ್ನ ಮನೆಯಿಂದ ಹೊರ ಹಾಕಿದ್ದಾರೆ. ಯಾವ ಮಕ್ಕಳು ತಾಯಿಯನ್ನ ನೋಡಿಕೊಳ್ಳಲು ಸಿದ್ಧರಿಲ್ಲ. ಶಾವಂತ್ರಮ್ಮ ತನ್ನ ಗಂಡನನ್ನ ಕಳೆದುಕೊಂಡ ಮೇಲೆ ಮಕ್ಕಳ ಜೊತೆಯಲ್ಲೇ ವಾಸ ಮಾಡುತ್ತಿದ್ದಳು. ಮಕ್ಕಳಿಗೆ ಮದುವೆ ಮಾಡಿದ್ಮೇಲೆ ಮಕ್ಕಳ ಮನಸ್ಥಿತಿಯೇ ಬೇರೆಯಾಗಿ, ಆಸ್ತಿ ಪಾಲು ಮಾಡಿಕೊಂಡು ಶಾವಂತ್ರಮ್ಮನನ್ನು ಮಕ್ಕಳೇ ಹೊರಗೆ ಹಾಕಿದ್ದಾರೆ. ಬ್ಯಾಂಕಿನಲ್ಲಿದ್ದ 5.50 ಲಕ್ಷ ರೂಪಾಯಿಯನ್ನೂ ಕಸಿದುಕೊಂಡ ಪಾಪಿ ಮಕ್ಕಳು ಮನೆಯಿಂದಲೇ ಹೊರ ಹಾಕಿದ್ದಾರೆ.
Advertisement
ಏಳು ತಿಂಗಳ ಹಿಂದೆ ಮನೆ ಬಿಟ್ಟು ಬಂದಿದ್ದ ಶಾವಂತ್ರಮ್ಮ ಹುಬ್ಬಳ್ಳಿಯಲ್ಲಿ ಕೆಲ ದಿನ ಇದ್ದು ನಂತರ ಹುಲಿಗಿಗೆ ಬಂದು ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣದಲ್ಲಿ ಮಲಗುತ್ತಿದ್ದರು. ಬಳಿಕ ಹುಲಗಿಯಲ್ಲಿ ಸ್ಥಳೀಯರು ಹಾಗೂ ಪೋಲೀಸರು ಕಾರುಣ್ಯ ವೃದ್ಧಾಶ್ರಮಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರುಣ್ಯ ವೃದ್ಧಾಶ್ರಮದವರು ಅಜ್ಜಿಯನ್ನ ತಮ್ಮ ಆಶ್ರಮಕ್ಕೆ ಕರೆತಂದು ಆಶ್ರಯ ನೀಡಿದ್ದಾರೆ. ಅಜ್ಜಿಯ ಹೆಸರಿನಲ್ಲಿದ್ದ ಹೊಲ ಮಾರಿದ ಮೇಲೆ ಮಕ್ಕಳು ಆಕೆಯನ್ನ ನೋಡಿಕೊಳ್ಳದೆ ಹೊರ ಹಾಕುವ ಹೀನ ಕೆಲಸ ಮಾಡಿದ್ದಾರೆ.
ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ, ಶಿಕ್ಷಕ, ಉಪನ್ಯಾಸಕರಾಗಿ, ಸರ್ಕಾರಿ ಕೆಲಸದಲ್ಲಿ ಇರುವ ಅಜ್ಜಿಯ ಮಕ್ಕಳೇ ಹೊರಗೆ ಹಾಕಿದ್ದು ನಿಜಕ್ಕೂ ದುರಂತ. ಆಸ್ತಿ ಸಿಕ್ಕ ಮೇಲೆ ತಾಯಿಯನ್ನ ಹೊರಗೆ ಹಾಕಿದ ಪಾಪಿ ಮಕ್ಕಳಿಗೆ ಕಾನೂನಿನ ಮೂಲಕ ಶಿಕ್ಷೆಯಾಗಬೇಕು ಎಂಬುದೇ ಸ್ಥಳೀಯರ ಆಗ್ರಹ.