ಚಿಕ್ಕಮಗಳೂರು: ಕಳೆದ ಎರಡು ದಿನಗಳಿಂದ ಸಂಜೆ ಹಾಗೂ ರಾತ್ರಿ ಸುರಿಯುತ್ತಿರುವ ಮಳೆಗೆ ಜನ ಕಂಗಾಲಾಗಿದ್ದು, ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಹಾಗೂ ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ಜಿಟಿ-ಜಿಟಿ ಮಳೆಯಾಗುತ್ತಿದ್ದು, ಮಳೆಗೆ ಜನ ಹೈರಾಣಾಗಿದ್ದಾರೆ. ಮಳೆ ಜೊತೆ ಮೈಕೊರೆವ ಚಳಿ ಸಹ ಇದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ರಾತ್ರಿ ಮಳೆಗೆ ಮಲೆನಾಡಿನ ಅಲ್ಲಲ್ಲಿ ಸಣ್ಣ-ಪುಟ್ಟ ಅವಾಂತರಗಳು ಕೂಡ ಸೃಷ್ಠಿಯಾಗಿವೆ. ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದ ರತ್ನಮ್ಮ-ನಾಗಪ್ಪಗೌಡ ಅವರ ಮನೆ ಮನೆ ಕುಸಿದು ಬಿದ್ದಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಮನೆಯವರು ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಆದರೆ ಜಿಲ್ಲಾದ್ಯಂತ ಮಳೆ ಸುರಿಯುತ್ತಿದ್ದು, ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರ ಜೋರಾಗಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಬಾಳೂರು, ಜಾವಳಿ, ಕಳಸ ಭಾಗದಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ನಾಡಿನ ಜೀವ ನದಿಗಳಾದ ತುಂಗಾ-ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕಳೆದ ಎರಡು ದಿನಗಳಿಂದ ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣವಿರೋ ಚಾರ್ಮಾಡಿಘಾಟಿಯಲ್ಲಿ ಇಡೀ ದಿನ ಭಾರೀ ಮಂಜು ಸುರಿಯುತ್ತಿದೆ. ಆಗಸ್ಟ್ ಮೊದಲ ವಾರದ ಮಳೆಯೇ ಮಲೆನಾಡಿಗರ ನಿದ್ದೆಗೆಡಿಸಿತ್ತು. ನಾನಾ ಅವಾಂತರಗಳು ಸೃಷ್ಟಿಯಾಗಿ ಮಲೆನಾಡಲ್ಲಿ ಪ್ರತಿವರ್ಷ ಹೀಗೆ ಮಳೆ ಸುರಿದರೆ ನಮ್ಮ ಬದುಕು ಹೇಗೆಂದು ಸ್ಥಳಿಯರು ಆತಂಕಕ್ಕೀಡಾಗಿದ್ದರು.
ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆ, ಇದೀಗ ಬಿರುಸು ಪಡೆದುಕೊಂಡಿದೆ. ಕಳೆದೆರಡು ದಿನಗಳಿಂದ ಬೆಳಗ್ಗೆಯಿಂದ ಮೋಡಗಟ್ಟಿದ ವಾತಾವರಣವಿದ್ದು, ಸಂಜೆ ವೇಳೆ ಬೀಸ್ತಿರೋ ರಣ ಗಾಳಿ ಹಾಗೂ ಸುರಿಯುತ್ತಿರೊ ಜಡಿ ಮಳೆ ಮತ್ತೊಂದು ಅಪಾಯದ ಮಳೆಯ ಮುನ್ಸೂಚನೆಯಾ ಎಂದು ಮಲೆನಾಡಿಗರು ಭಯಭೀತರಾಗಿದ್ದಾರೆ.