ಶಿವಮೊಗ್ಗ: ವೆಂಟಿಲೇಟರ್ ಸಿಗದೇ ಕೊರೊನಾ ಸೋಂಕಿತ ವ್ಯಕ್ತಿಯೋರ್ವ ನರಳಿ ನರಳಿ ಪ್ರಾಣ ಬಿಟ್ಟ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಶಿಕಾರಿಪುರದ ಆನಂದ್ (45) ಮೃತರಾಗಿದ್ದಾರೆ. ಆನಂದ್ ಕೊರೊನಾ ಸೋಂಕಿಗೆ ತುತ್ತಾಗಿ ಹೋಂ ಐಸೋಲೇಷನ್‍ಗೆ ಒಳಗಾಗಿದ್ದರು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾದ ಪರಿಣಾಮ ಮೃತ ಆನಂದ್ ಕುಟುಂಬಸ್ಥರು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.
Advertisement
Advertisement
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತ ವ್ಯಕ್ತಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಬೇಕಿತ್ತು. ಆದರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಖಾಲಿ ಇಲ್ಲದ ಕಾರಣ ಸಾಮಾನ್ಯ ಕೋವಿಡ್ ವಾರ್ಡ್‍ನಲ್ಲಿಯೇ ಸೋಂಕಿತನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ನಿನ್ನೆ ರಾತ್ರಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ಸುಮಾರು ಎರಡು ಗಂಟೆಗಳ ಕಾಲ ಸೋಂಕಿತ ಆನಂದ್ ನರಳಾಡಿದ್ದಾರೆ. ಆದರೆ ಈ ವೇಳೆ ವೈದ್ಯರು ಆಗಲಿ, ಆರೋಗ್ಯ ಸಿಬ್ಬಂದಿ ಆಗಲಿ ಆತನಿಗೆ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಹೀಗಾಗಿ ಸೋಂಕಿತ ವೆಂಟಿಲೇಟರ್ ಸಿಗದೇ ನರಳಾಡಿ ಪ್ರಾಣಬಿಟ್ಟಿದ್ದಾರೆ.
Advertisement
Advertisement
ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಸೋಂಕಿತ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬಸ್ಥರು ಇದೀಗ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಸೋಂಕಿತ ಪ್ರಾಣಬಿಡುವ ಮುನ್ನ ನರಳಾಡುತ್ತಿರುವ ದೃಶ್ಯವನ್ನು ಕೋವಿಡ್ ವಾರ್ಡ್‍ನಲ್ಲಿದ್ದ ಇತರೆ ಸೋಂಕಿತರು ತಮ್ಮ ಮೊಬೈಲ್‍ನಲ್ಲಿ ಸರೆ ಹಿಡಿದಿದ್ದಾರೆ.
ಒಟ್ಟಿನಲ್ಲಿ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸರಿಯಾದ ಚಿಕಿತ್ಸೆ ದೊರೆಯದೇ ಸೋಂಕಿತರು ಮೃತಪಡುತ್ತಿದ್ದಾರೆ ಎಂಬ ಅಂಶ ಈ ಘಟನೆಯಿಂದ ಬೆಳಕಿಗೆ ಬಂದಿದೆ.