ವಿಜಯಪುರ: ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಶೂಟೌಟ್ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ನಡೆದ ಮಾತಿನ ಚಕಮಕಿಯಲ್ಲಿ ಓರ್ವನ ಮೇಲೆ ಮತ್ತೋರ್ವ ಗುಂಡು ಹಾರಿಸಿರುವ ಘಟನೆ ವಿಜಯಪುರ ನಗರದ ಜಿ.ಪಂಚಾಯತ್ ಹತ್ತಿರ ನಡೆದಿದೆ.
ಬಾರಾಕೊಟ್ರಿ ತಾಂಡಾ ನಿವಾಸಿ ಪದ್ದು ರಾಠೋಡ್ ಮೇಲೆ ಗುಂಡಿನ ದಾಳಿ ಆಗಿದ್ದು, ತುಳಸಿರಾಮ್ ಎಂಬಾತ ಶೂಟೌಟ್ ಗೈದು ಪರಾರಿಯಾಗಿದ್ದಾನೆ. ಹಣಕಾಸಿನ ವ್ಯವಹಾರ ಹಿನ್ನೆಲೆ ಶೂಟೌಟ್ ನಡೆದಿದೆ ಎನ್ನಲಾಗಿದ್ದು, ಗಾಯಗೊಂಡಿರುವ ಪದ್ದುನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಶೂಟ್ ಮಾಡಿದ ಆರೋಪಿ ತುಳಸಿ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದು, ಕಾರಿನ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಏಕಾಏಕಿ 8-10 ಜನರು ಬಂದರು. ನಮ್ಮ ತಂದೆ ಮೇಲೆ ವಾಹನ ಹಾಯಿಸಿದರು. ನನ್ನ ಮೇಲೂ ಹಲ್ಲೆ ಮಾಡೋಕೆ ಬಂದ್ರು. ಆಗ ನಾನು ಒಂದು ಸುತ್ತು ಗುಂಡು ಹಾರಿಸಿದೆ. ನಂತರ ಅವರು ಅಲ್ಲಿಂದ ಪರಾರಿಯಾದ್ರು ಎಂದು ತಿಳಿಸಿದ್ದಾನೆ.
ಸ್ಥಳಕ್ಕೆ ಎಸ್ಪಿ ಅನುಪಮ ಅಗ್ರವಾಲ್, ಎಎಸ್ಪಿ ರಾಮ್ ಅರಸಿದ್ಧಿ ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ.
ಈ ಕುರಿತು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.