ವಿಜಯಪುರ: ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಡಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆದಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುದ್ದೇಬಿಹಾಳ ತಾಲೂಕಿನ ಬಸರಕೋಡದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ್ ಗಾಳಿಯಲ್ಲಿ ಗುಂಡು ಹಾರಿಸಿದವರು. ಕಾರ ಹುಣ್ಣಿಮೆ ನಿಮಿತ್ತ ಗ್ರಾಮದಲ್ಲಿ ಕರಿ ಹರಿಯುವ ಮುನ್ನ ಈ ಘಟನೆ ನಡೆದಿದೆ.
ಅನುಮತಿ ಪಡೆದ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸುರಕ್ಷಿತ ಸ್ಥಳದಲ್ಲಿ ಗುಂಡು ಹಾರಿಸದೇ ಜನರ ಗುಂಪಿ ನಡುವೆ ಗಾಳಿಯಲ್ಲಿ ಗುಂಡು ಹಾರಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಸಂಪ್ರದಾಯದಂತೆ ಗ್ರಾಮೀಣ ಪ್ರದೇಶಗಳಲ್ಲಿ ಗೌಡಕಿ ಮನೆತನಗಳಲ್ಲಿ ಈ ರೀತಿ ಗುಂಡು ಹಾರಿಸುವ ಪದ್ಧತಿ ಇದೆ. ಆದರೆ ಗ್ರಾಮ ಪಂಚಾಯಿತಿ ಕಟ್ಟಡದ ಮುಂದೆಯೇ ಜನನಿಬಿಡ ಪ್ರದೇಶದಲ್ಲಿ ಗುಂಡು ಹಾರಿಸಿರುವುದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಸುತ್ತ ಜನರನ್ನು ನಿಲ್ಲಿಸಿಕೊಂಡು ಗುಂಡು ಹಾರಿಸಿರುವ ಕುರಿತು ವಿರೋಧ ವ್ಯಕ್ತವಾಗುತ್ತಿದೆ.