ಕಲಬುರಗಿ: ಕೊರೊನಾ ಲಾಕ್‍ಡೌನ್ ನಿಂದಾಗಿ ಎಂಥೆಂಥವರ ಬದುಕು ಬೀದಿಗೆ ಬಂದಿದೆ. ಅಂಥದರಲ್ಲಿ ಬೀದಿಲಿ ಬದುಕುವವರ ಕಷ್ಟ ಇದೀಗ ಹೇಳತೀರದಾಗಿದೆ. ಕಲಬುರಗಿಯ ರಾಣೇಸಪೀರ್ ದರ್ಗಾ ಬಳಿ ಪ್ಲಾಸ್ಟಿಕ್ ಬಿಂದಿಗೆ ಮಾರಾಟ ಮಾಡುತ್ತಿದವರ ಉದ್ಯೋಗಕ್ಕೆ ಕತ್ತರಿ ಬಿದಿದ್ದು, ಕಳೆದ 8 ದಿನಗಳಿಂದ ಇಲ್ಲಿನ 30 ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುತ್ತಿವೆ.
ಈ ಹಿಂದೆ ಬೈಕ್ ಗಳ ಮೇಲೆ ಬಡಾವಣೆಗಳಿಗೆ ಹೋಗಿ ಬಿಂದಿಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಕಳೆದ 20 ದಿನಗಳಿಂದ ಲಾಕ್‍ಡೌನ್ ಹಿನ್ನೆಲೆ ಇವರು ಯಾವ ಬಡಾವಣೆಗಳಿಗೂ ಹೋಗಿ ಬಿಂದಿಗೆ ಮಾರಾಟ ಮಾಡಿಲ್ಲ. ನಿತ್ಯ 400 ರಿಂದ 500 ರೂಪಾಯಿವರೆಗೆ ಆದಾಯ ಗಳಿಸಿ ತಮ್ಮ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ಬಳಿಕ ಇವರ ಈ ಉದ್ಯೋಗಕ್ಕೆ ಸಂಪೂರ್ಣ ಕತ್ತರಿ ಬಿದ್ದಿದೆ.
ಅಲ್ಪ ಸ್ವಲ್ಪ ಉಳಿಸಿದ ಹಣದಿಂದ ಇಷ್ಟು ದಿನ ದಿನಸಿ ಧಾನ್ಯ ಹಾಗೂ ತರಕಾರಿ ಖರೀದಿಸಿ ಜೀವನ ನಡೆಸಿದ್ದಾರೆ. ಆದ್ರೆ ಇವರ ಉಳಿತಾಯದ ಹಣ ಸಹ 8 ದಿನಗಳ ಹಿಂದೆ ಖಾಲಿಯಾಗಿ ತುತ್ತು ಅನ್ನಕ್ಕೆ ಪರದಾಡುವಂತಾಗಿದೆ. ಹೀಗಾಗಿ ಲಾಕ್‍ಡೌನ್ ಮುಗಿಯುವರೆಗೆ ಯಾರಾದ್ರೂ ದಾನಿಗಳು ದಿನಸಿ ಪದಾರ್ಥ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.