ಮಂಡ್ಯ: ತನ್ನ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದು ಆ ತಂದೆಯ ಬಯಕೆ ಆಗಿತ್ತು. ಅದರಂತೆ ಅವರ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ ಕೂಡ ಆಗಿದ್ದರು. ಆದರೆ ಇದೀಗ ಕೊರೊನಾ ಆರ್ಭಟದಿಂದಾಗಿ ಇದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ. ಕೆಲಸವಿಲ್ಲದ ಕಾರಣ ಇದೀಗ ಜೀವನೋಪಾಯಕ್ಕೆ ತರಕಾರಿ ಮಾರುತ್ತಿದ್ದಾರೆ.
ಸದ್ಯ ಕಳೆದ ಮೂರು ನಾಲ್ಕು ತಿಂಗಳಿನಿಂದ ಇಡೀ ವಿಶ್ವದಲ್ಲಿ ಕೊರೊನಾ ರಣಕೇಕೆ ನಡೆಸುತ್ತಿದೆ. ಕೊರೊನಾ ಮಟ್ಟ ಹಾಕುವ ಉದ್ದೇಶದಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‍ಡೌನ್ ಮೊರೆ ಹೋಗಿದ್ದಾವೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಿಂದಾಗಿ ಅನೇಕ ಕಂಪನಿಗಳು ಬಾಗಿಲು ಹಾಕಿದ್ದು, ಇದರಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೀಗಿದ್ದರೂ ಸಹ ಮಂಡ್ಯದ ಯುವತಿ ಅನು ಧೃತಿಗೆಡದೆ ಬದುಕು ಕಟ್ಟಿಕೊಳ್ಳಲು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಅನು ಕಳೆದ ನಾಲ್ಕು ವರ್ಷದಿಂದ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಈಕೆ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿದ ಪರಿಣಾಮ ಕೆಲಸವಿಲ್ಲದೇ ವಾಪಸ್ ಮಂಡ್ಯಗೆ ಬಂದಿದ್ದಾರೆ. ಮಂಡ್ಯಗೆ ಬಂದು ಏನು ಮಾಡಬೇಕು ಎಂದು ಕುಳಿತಿದ್ದಾಗ ಈಕೆಗೆ ಹೊಳೆದಿದ್ದು ತರಕಾರಿ ಮಾರಾಟ ಮಾಡುವುದು. ಹೀಗಾಗಿ ಈಕೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಅನು ಅವರ ತಂದೆ ವಿರೇಂದ್ರಸಿಂಗ್ ಮೂಲತಃ ಉತ್ತರ ಪ್ರದೇಶದವರು. ಮಂಡ್ಯದಲ್ಲಿ ಕಳೆದ 26 ವರ್ಷಗಳಿಂದ ನೆಲಸಿದ್ದು, ತನ್ನ ಮಗಳನ್ನು ಓದಿಸುವ ಸಲುವಾಗಿ ಪಾನಿಪುರಿ, ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ತಂದೆಯ ಶ್ರಮದ ಪ್ರತಿಫಲವಾಗಿ ಅನು ರಾಮನಗರದ ಗೌಸಿಯಾ ಎಂಜಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಇಷ್ಟು ವರ್ಷ ಕೆಲಸ ಮಾಡಿಕೊಂಡು ನೆಮ್ಮದಿಯಾಗಿ ಇದ್ದರು. ಆದರೆ ಇದೀಗ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ಈಗ ಅನು ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬದುಕು ನಡೆಸಲು ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಗಳು ಮಾಡುತ್ತಿರುವ ಈ ಕೆಲಸ ಬೇಸರ ತಂದರು ಸಹ ನನ್ನ ಮಗಳು ಮಾಡುತ್ತಿರುವುದು ಇನ್ನೊಬ್ಬರಿಗೆ ಮಾದರಿಯಾಗುತ್ತಿರುವುದು ನನಗೆ ನೆಮ್ಮದಿ ಇದೆ ಎಂದು ಅನು ತಂದೆ ಹೇಳಿದ್ದಾರೆ.