– ನಮ್ಮದು ರೈತರದ್ದು ಬ್ಲಡ್ ರಿಲೇಶನ್
ಬೆಂಗಳೂರು: ರೈತರೊಂದಿಗೆ ಭಾವನಾತ್ಮಕವಲ್ಲ, ರಕ್ತ ಸಂಬಂಧವಿದೆ ಎಂದು ನಟ ದರ್ಶನ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸನ್ಮಾನ ಮಾಡುವ ಮೂಲಕ ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಡಿ ಬಾಸ್, ಎಲ್ಲರೂ ರೈತರದ್ದು ನಮ್ಮದು ಭಾವನಾತ್ಮಕ ಸಂಬಂಧ ಎನ್ನುತ್ತಾರೆ. ಆದರೆ ಅದು ಕೇವಲ ಭಾವನಾತ್ಮಕವಲ್ಲ, ಬ್ಲಡ್ ರಿಲೇಶನ್ ಆಗಿದೆ. ಅವರು ಆಹಾರ ನೀಡಿದರೇನೆ ನಮ್ಮ ಮೈಯ್ಯಲ್ಲಿ ರಕ್ತ. ಇಲ್ಲವಾದರೆ ನಮ್ಮ ಮೈಯ್ಯಲ್ಲಿ ರಕ್ತ ಇರುವುದಿಲ್ಲ ಎಂದರು.
ರೈತರಿಗೆ ಏನೇನು ಒಳ್ಳೆಯದು ಮಾಡಬಹುದೋ ಅದೆಲ್ಲವನ್ನೂ ಮಾಡುತ್ತೇನೆ. ನಾವು ದೊಡ್ಡದೇನು ಮಾಡುತ್ತಿಲ್ಲ. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜಾಹೀರಾತಿನ ಮೂಲಕ ಹೇಳುತ್ತೇನೆ ಅಷ್ಟೇ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದರ್ಶನ್ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೃಷಿ ಇಲಾಖೆ ರಾಯಭಾರಿ ಆಗಿದ್ದಾರೆ. ಅದಕ್ಕೆ ಸಮಸ್ತ ನಾಡಿನ ಪರವಾಗಿ ಅಭಿನಂದಿಸುತ್ತೇನೆ. ದರ್ಶನ್ ಕಾರ್ಯಕ್ರಮವನ್ನು ವಿಧಾನಸೌಧದ ಹೊರಭಾಗ ಮಾಡಿದ್ದರೆ 50 ಸಾವಿರಕ್ಕೂ ಅಧಿಕ ಜನ ಸೇರುತ್ತಿದ್ದರು. ಅವರ ಅಭಿಮಾನಿ ಬಳಗ ದೊಡ್ಡದಿದೆ. ಇದರಿಂದ ಕೃಷಿ ಇಲಾಖೆಗೂ ಬಲ ಬಂದಿದೆ ಎಂದು ತಿಳಿಸಿದರು.
ಮಾರ್ಚ್ 11ಕ್ಕೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆ ಆಗುತ್ತದೆ. ನೀವೂ ನೋಡಿ ನಾನು ನೋಡುತ್ತೇನೆ ಎಂದು ಬಿಎಸ್‍ವೈ ತಿಳಿಸಿದರು.