– ಜನರಲ್ಲಿ ಹೆಚ್ಚಿದ ಪ್ರವಾಹದ ಆತಂಕ
– ರಾಯಚೂರಿನಲ್ಲಿ ಏರುತ್ತಲೇ ಇದೆ ನೀರಿನ ಪ್ರಮಾಣ
ರಾಯಚೂರು: ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು, ಜನ ಕಂಗಾಲಾಗಿದ್ದಾರೆ. ಇದೀಗ ಕೆಲ ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹ ತಗ್ಗಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇಂದು ಸಹ 8 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ಹಾಗೂ ಭೀಮಾ ನದಿಗಳಿಂದ ಬಿಡಲಾಗುತ್ತಿದೆ.
Advertisement
ಕೃಷ್ಣಾ ನದಿಯಲ್ಲಿ ಪ್ರವಾಹದ ಭೀತಿ ಮುಂದುವರಿದಿದ್ದು, ರಾಯಚೂರಿನಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ. ಭೀಮಾನದಿಯಿಂದ 3.40 ಲಕ್ಷ ಕ್ಯೂಸೆಕ್, ಕೃಷ್ಣಾ ನದಿಯಿಂದ 92 ಸಾವಿರ ಕ್ಯೂಸೆಕ್ ಸೇರಿದಂತೆ ಎರಡೂ ನದಿಗಳಿಂದ 4.32 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಇದರ ಜೊತೆಗೆ ಸೊನ್ನಾ ಬ್ಯಾರೇಜಿನಿಂದ ಬಿಟ್ಟ 8 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಇಂದು ರಾಯಚೂರು ತಾಲೂಕಿಗೆ ಬಂದು ಸೇರುವ ನಿರೀಕ್ಷೆ ಇದೆ. ಹೀಗಾಗಿ ಪ್ರವಾಹ ಮತ್ತೆ ಹೆಚ್ಚಲಿದೆ.
Advertisement
Advertisement
ಪ್ರವಾಹ ಏದುರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಒಂದು ಸೇನಾ ಹಾಗೂ ಎನ್‍ಡಿಆರ್‍ಎಫ್ ತಂಡಗಳು ಶಕ್ತಿನಗರದಲ್ಲಿ ಬೀಡು ಬಿಟ್ಟಿವೆ. ನೀರಿನ ಹರಿವು ಹೆಚ್ಚಾದರೆ ಮೂರು ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರ್ಜಾಪುರ, ಬೂರ್ದಿಪಾಡ ಹಾಗೂ ಡಿ ರಾಂಪುರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.
Advertisement
ಭೀಮಾ ನದಿಯಿಂದ ಭಾರೀ ಪ್ರಮಾಣದ ನೀರು ಕೃಷ್ಣಾ ನದಿಗೆ ಸೇರುತ್ತಿರುವುದರಿಂದ ರಾಯಚೂರಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ನದಿಪಾತ್ರದ ಗುರ್ಜಾಪುರ ಗ್ರಾಮದ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಎರಡು ದಿನಗಳಿಂದ ಗ್ರಾಮದಲ್ಲಿ 13 ಬಸ್ ಗಳನ್ನು ನಿಲ್ಲಿಸಲಾಗಿದೆ. ಆದರೆ ಗ್ರಾಮಸ್ಥರು ಮಾತ್ರ ಊರು ಬಿಟ್ಟು ಬರುತ್ತಿಲ್ಲ. ನದಿಯಲ್ಲಿ ನೀರಿನ ಪ್ರಮಾಣ ಇನ್ನೂ ಹೆಚ್ಚಾದ ಮೇಲೆ ಬರುತ್ತೇವೆ ಎನ್ನುತ್ತಿದ್ದಾರೆ. ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಸೇನಾ ಪಡೆ ಹಾಗೂ ಎನ್‍ಡಿಆರ್‍ಎಫ್ ತಂಡಗಳನ್ನು ಕರೆಯಿಸಿಕೊಂಡಿದೆ. ಗ್ರಾಮಸ್ಥರು ಮಾತ್ರ ಸದ್ಯಕ್ಕೆ ನಮಗೆ ಭಯವಿಲ್ಲ ಎಂದು ಗ್ರಾಮದಲ್ಲೇ ಉಳಿದಿದ್ದಾರೆ.
ಡಿಸಿಎಂ ಸವದಿ ಭೇಟಿ
ಕೊನೆಗೂ ನೆರೆ ಪೀಡಿತ ಪ್ರದೇಶದತ್ತ ಡಿಸಿಎಂ ಹಾಗೂ ರಾಯಚೂರು ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮುಖ ಮಾಡುತ್ತಿದ್ದಾರೆ. ಇಂದು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಬೆಳಗ್ಗೆ 11:30ಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 2:30ರ ವರೆಗೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಿದ್ದಾರೆ.