ಉಡುಪಿ: ರಾಮ ರಾಮ ರಾಮ.. ದೇಶಾದ್ಯಂತ ಒಂದು ತಿಂಗಳು ಮರ್ಯಾದಾ ಪುರುಷೋತ್ತಮನ ನಾಮ ಮನೆ ಮನೆಗಳಿಗೆ ತಲುಪುತ್ತಿದೆ. ವಿಶ್ವದ ಅತೀ ದೊಡ್ಡ ಧನ ಸಂಗ್ರಹ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಕೇವಲ 15 ದಿನದಲ್ಲಿ ಜನ ರಾಮಲಲ್ಲಾನಿಗಾಗಿ ಜನ ಕೊಟ್ಟ ದೇಣಿಗೆ ಕೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು.
ಸಾಮಾನ್ಯ ಜನರೇ ಸೇರಿ ರಾಮಮಂದಿರ ನಿರ್ಮಾಣಕ್ಕೆ ತಗಲುವ ಧನ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸರ್ಕಾರದ ನೆರವನ್ನೇ ಪಡೆಯದೇ ಸುಮಾರು ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ರಾಮಲಲ್ಲಾನ ಮಂದಿರ ನಿರ್ಮಾಣವಾಗುತ್ತಿದೆ. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಕೈಗೊಂಡ ದೇಶದ ಅಭಿಯಾನದ ನೇತೃತ್ವವನ್ನು ದಕ್ಷಿಣ ಭಾರತದಲ್ಲಿ ಪೇಜಾವರ ಸ್ವಾಮೀಜಿ ವಹಿಸಿಕೊಂಡಿದ್ದಾರೆ. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ದಕ್ಷಿಣ ಭಾರತದ ಏಕೈಕ ವಿಶ್ವಸ್ಥರಾಗಿರುವ ಸ್ವಾಮೀಜಿ ದಕ್ಷಿಣದ ರಾಜ್ಯಗಳಲ್ಲಿ ಅಭಿಯಾನ ಮಾಡುತ್ತಾ, ಪ್ರಮುಖ ಕೇಂದ್ರಗಳನ್ನು ಭೇಟಿಯಾಗಿ ಧನ ಸಂಗ್ರಹ ಮಾಡುತ್ತಿದ್ದಾರೆ. 15 ದಿನಗಳಲ್ಲಿ 525 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಪೇಜಾವರ ಮಠದ ವಿಶ್ವೇಶ ತೀರ್ಥರ ಕಾಲದಲ್ಲಿ ಕೋರ್ಟ್ ಕಟ್ಟಳೆಗಳು ಮುಗಿದು ವಿವಾದಿತ ಭೂಮಿ ಹಿಂದೂಗಳ ಪಾಲಾಗಿತ್ತು. ಗುರುಗಳು ವೃಂದಾವನಸ್ಥರಾದ ನಂತರ ಟ್ರಸ್ಟ್ ನ ವಿಶ್ವಸ್ಥ ಸ್ಥಾನವನ್ನು ವಿಶ್ವಪ್ರಸನ್ನ ತೀರ್ಥರಿಗೆ ಒಲಿದಿದ್ದು, ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಕರ ಸಂಕ್ರಾಂತಿಯ ದಿನ ತಿರುಗಾಟ ಆರಂಭಿಸಿರುವ ಶ್ರೀಗಳು ಕೇರಳ, ತಮಿಳ್ನಾಡು, ಆಂಧ್ರಪ್ರದೇಶಗಳಲ್ಲಿ ಅಭಿಯಾನ ನಡೆಸಿ ಧನ ಸಂಗ್ರಹ ಪೂರೈಸಿದ್ದಾರೆ. ಗ್ರಾಮದಿಂದ ರಾಜಭವನದವರೆಗೆ, ಧಾರ್ಮಿಕ ಕೇಂದ್ರ, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಮಾಡಿದ್ದಾರೆ.
ಭಜನಾ ಮಂದಿರ, ಹಿಂದೂಪರ ಸಂಘಟನೆಗಳು ಮನೆ ಮನೆ ಭೇಟಿ ನೀಡುತ್ತಿದ್ದು ಧನ ಸಂಗ್ರಹಿಸುತ್ತಿವೆ. ಫೆಬ್ರವರಿ 27 ಮಾಘ ಪೂರ್ಣಿಮೆವರೆಗೆ ನಿಧಿ ಸಂಗ್ರಹ ಅಭಿಯಾನ ದೇಶದಲ್ಲಿ ನಡೆಯಲಿದೆ. ಸಾವಿರ ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ನಿರೀಕ್ಷೆಯಿದೆ.