ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ಇಂದು ರಾತ್ರಿಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ದೆಹಲಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ಇಂದು ರಾತ್ರಿ 8:30ರ ವಿಮಾನದ ಮೂಲಕ ಬೆಂಗಳೂರಿಗೆ ಸಂತೋಷ್ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಾರ್ಲಿಮೆಂಟ್ ಬೋರ್ಡ್ ಸದಸ್ಯರಾಗಿರುವ ಸಂತೋಷ್ ಅವರು ಸಭೆಗೂ ಮುನ್ನ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ವೀಕ್ಷಕರ ಭೇಟಿಗೂ ಮುನ್ನ ರಾಜ್ಯಕ್ಕೆ ಸಂತೋಷ್ ಭೇಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್
ಇತ್ತ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದಾರೆ. ರಾತ್ರಿ 8:30 ರ ವಿಸ್ತಾರ ವಿಮಾನದ ಮೂಲಕ ಬೆಂಗಳೂರಿಗೆ ಹೋಗಲಿದ್ದಾರೆ. ಅಮಿತ್ ಶಾ ಭೇಟಿಗಾಗಿ ಬಂದಿದ್ದರು. ಆದರೆ ನಾಳೆ ರಾಜ್ಯಕ್ಕೆ ವೀಕ್ಷಕರ ಆಗಮನ ಹಿನ್ನೆಲೆಯಲ್ಲಿ ಇದೀಗ ಅಮಿತ್ ಶಾ ಅವರನ್ನು ಭೇಟಿಯಾಗದೇ ನಿರಾಣಿ ವಾಪಸ್ಸಾಗುತ್ತಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು
ಈ ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಇದೀಗ ವೀಕ್ಷಕರಾಗಿ ಆಯ್ಕೆಯಾಗಿದ್ದಾರೆ. ಧರ್ಮೆಂದ್ರ ಪ್ರಧಾನ್ ಗೆ ಕರ್ನಾಟಕಕ್ಕೆ ತೆರಳಲು ಹೈಕಮಾಂಡ್ ಸೂಚನೆ ನೀಡಿದೆ. ಅದರಂತೆ ರಾಜ್ಯಕ್ಕೆ ಭೇಟಿ ಕೊಡಲಿರುವ ಪ್ರಧಾನ್ ಅವರು ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ನಡೆಸಲಿದ್ದಾರೆ. ಮುಂದಿನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕಸರತ್ತು ಆರಂಭವಾಗಿದ್ದು, ನಾಳೆ ರಾಜ್ಯಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ರಾಜ್ಯಕ್ಕೆ ಭೇಟಿ ನಿಡಲಿದ್ದಾರೆ.