ಮಂಡ್ಯ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದು ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಬಂದು ಉಗ್ರನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಮೇಲುಕೋಟೆಯ ಜೀಯರ್ ಮಠಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ಮಾಡಲಾಯ್ತು. ಇದೇ ವೇಳೆ ಶಾಲು, ಮೈಸೂರು ಪೇಟೆ, ಏಲಕ್ಕಿ ಹಾರ ಹಾಕಿ ರಾಜ್ಯ ಸರ್ಕಾರ ಪರವಾಗಿ ಸಚಿವ ನಾರಾಯಣಗೌಡ ಸ್ವಾಗತ ಕೋರಿದರು. ರಾಜ್ಯ ಪೊಲೀಸರು ಅವರಿಗೆ ಗೌರವ ಸಮರ್ಪಣೆ ಮಾಡಿ ಬರಮಾಡಿಕೊಂಡರು.
Advertisement
Advertisement
ಈ ವೇಳೆ ಮಠದಲ್ಲಿ ಕೆಲ ಕಾಲ ಸಮಯ ಕಳೆದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಕುಟುಂಬ ಮಠದಲ್ಲೇ ಪೂಜೆ ಹಾಗೂ ಪ್ರಸಾದ ಸೇವನೆ ಮಾಡಿದರು. ಬಳಿಕ ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದುಕೊಂಡರು. ನಂತರ ಬೆಟ್ಟ ಹತ್ತಿ, ಬಳಿಕ ಬೆಟ್ಟದ ಮೇಲಿನ ಉಗ್ರನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಿವರಾಜ್ ಸಿಂಗ್ ಚೌಹಾಣ್‍ಗೆ ಸಚಿವ ನಾರಾಯಣಗೌಡ ಸಾಥ್ ನೀಡಿದರು.
Advertisement
Advertisement
ಇದಾದ ನಂತರ ಮಾತನಾಡಿದ ಚೌಹಾಣ್, ಮಧ್ಯಪ್ರದೇಶದ ವಿಕಾಸದ ಜೊತೆಗೆ ಪ್ರೀತಿಯ ಜನತೆಯ ಕಲ್ಯಾಣಕ್ಕೆ ಮೇಲುಕೋಟೆಯಲ್ಲಿ ಪೂಜೆ ಸಲ್ಲಿಸಿದ್ದೇನೆ. ಇಲ್ಲಿನ ರಾಮಾನುಜಾಚಾರ್ಯರು ಸಾವಿರಾರು ವರ್ಷಗಳ ಹಿಂದೆ ಏಕತೆಯ ಸಂದೇಶ ಸಾರಿದ್ದಾರೆ. ಅವರು ಎಲ್ಲರೂ ಒಂದೇ ಎಂದು ಹೇಳಿದ್ದಾರೆ. ಆ ಸಂದೇಶದಂತೆ ನಾವೆಲ್ಲರೂ ಭಾರತದಲ್ಲಿ ಇರಬೇಕಿದೆ. ನಾವೆಲ್ಲರೂ ಒಂದೇ ಎನ್ನುವಂತೆ ದೇಶದಲ್ಲಿ ಜಾತಿ ಬೇಧ ಬಿಟ್ಟು ಬಾಳಬೇಕಿದೆ. ಈ ಮೂಲಕ ಏಕತೆಯಿಂದ ದೇಶವನ್ನು ಮುನ್ನೆಡೆಸಬೇಕಿದೆ ಎಂದು ಹೇಳಿದರು.
ಜೊತೆಗೆ ನಮ್ಮ ದೇಶ ಇಂದು ಕೊರೊನಾ ಸಂಕಷ್ಟದಲ್ಲಿದೆ. ಒಂದು ಕಡೆ ಕೊರೊನಾ ಇದ್ದರೆ, ಮತ್ತೊಂದು ಕಡೆ ಗಡಿಯಲ್ಲಿ ಯುದ್ಧದ ಆಹ್ವಾನ ಇದೆ. ನಮ್ಮ ಪ್ರಧಾನಿ ನೇತೃತ್ವದಲ್ಲಿ ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದ್ದೇವೆ. ಜೊತೆಗೆ ಸೇನೆ ನಮ್ಮ ಗಡಿಯನ್ನು ಕೂಡ ರಕ್ಷಣೆ ಮಾಡುತ್ತಿದೆ. ನಮ್ಮ ಪ್ರಧಾನಿಮಂತ್ರಿ ಓರ್ವ ಅದ್ಭುತ ನಾಯಕರು. ಹೀಗಿದ್ದರೂ ನಮ್ಮಂತಹ ಕಾರ್ಯಕರ್ತರ ಕರ್ತವ್ಯ ಇದ್ದೆ ಇದೆ. ನಮ್ಮ ನಮ್ಮ ರಾಜ್ಯಗಳಲ್ಲಿ ಒಳ್ಳೆಯ ಕೆಲಸ ಮಾಡಿ ಕೊರೊನಾ ಮುಕ್ತಿಗೆ ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.