ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಅದರಲ್ಲೂ ಮಡಿಕೇರಿ ತಾಲೂಕಿನ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದೆ. ಇದರೊಂದಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿಗೊಳ್ಳುವ ಭೀತಿ ಎದುರಾಗಿದೆ. ಹಾಗಾಗಿ ಹೋಬಳಿ ಮಟ್ಟದಲ್ಲಿ ಕೋವಿಡ್ ಆಸ್ಪತ್ರೆ ತೆರೆಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಡಿಕೇರಿ ತಾಲೂಕಿನ ನಾಪೋಕ್ಲುನಲ್ಲಿ ನಿತ್ಯ ಹತ್ತಾರು ಪ್ರಕಣಗಳು ದಾಖಲಾಗುತ್ತಿದ್ದು, ಒಂದೇ ವಾರದಲ್ಲಿ ನಾಪೋಕ್ಲು ಪಟ್ಟಣವೊಂದರಲ್ಲೇ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ. ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ 12 ಕ್ಕೂ ಹೆಚ್ಚು ಗ್ರಾಮಗಳಿದ್ದು, 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಲಾಕ್‍ಡೌನ್ ಆದ ಬಳಿಕ ಬೆಂಗಳೂರಿನಿಂದ ತಮ್ಮ ಗ್ರಾಮಗಳಿಗೆ ಜನ ವಾಪಸ್ ಆಗಿದ್ದರಿಂದಾಗಿ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ. ಇದನ್ನೂ ಓದಿ: ಕೋಣಗಳು ಕಾದಾಡಿದ್ದಕ್ಕೆ ಬಡಿದಾಡಿಕೊಂಡ ಮಾಲೀಕರು – ಆಸ್ಪತ್ರೆಗೆ ದಾಖಲು
ಕೋವಿಡ್ ಲಕ್ಷಣಗಳಿಂದ ಗ್ರಾಮದ ಹಲವು ಮಂದಿ ಬಳಲುತ್ತಿದ್ದಾರೆ. ಕೋವಿಡ್ ಆಸ್ಪತ್ರೆ ದೂರದಲ್ಲಿರುವುದರಿಂದ ಜನರು ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಿಸಿಕೊಳ್ಳುವುದು ತಡವಾಗುತ್ತಿದೆ. ಜೊತೆಗೆ ಸೋಂಕಿತರು ಸ್ವತಃ ತಾವೇ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಸೋಂಕಿನಿಂದ ಆರೋಗ್ಯ ಸ್ಥಿತಿ ತೀವ್ರ ಗಂಭೀರಗೊಂಡ ಬಳಿಕ ಅನಿವಾರ್ಯವೆಂದು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಹೀಗೆ ತಡವಾಗಿ ಆಸ್ಪತ್ರೆಗೆ ದಾಖಲಾಗುವುತ್ತಿರುವುದರಿಂದ ಚಿಕಿತ್ಸೆ ಫಲಿಸದೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.
ಮತ್ತೊಂದೆಡೆ ಇನ್ನೇನು ಮಳೆಗಾಲ ಆರಂಭವಾಗುತ್ತಿರುವುದರಿಂದ ಕಾವೇರಿ ನದಿ ತುಂಬಿದಲ್ಲಿ ನಾಪೋಕ್ಲು ಸುತ್ತಮುತ್ತ ರಸ್ತೆಗಳೆಲ್ಲಾ ಸಂಪೂರ್ಣ ಬ್ಲಾಕ್ ಆಗಲಿವೆ. ಇಂತಹ ಸ್ಥಿತಿ ನಿರ್ಮಾಣವಾದಲ್ಲಿ ನಾಪೋಕ್ಲು ಭಾಗದ ನೂರಾರು ಸೋಂಕಿತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎನ್ನೋದು ಸ್ಥಳೀಯರ ಅಭಿಪ್ರಾಯ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದಿದ್ದವ ಆರೋಗ್ಯ ಇಲಾಖೆಯ ಲ್ಯಾಪ್‍ಟಾಪ್ ಎಗರಿಸಿ ಸಿಕ್ಕಿಬಿದ್ದ
ಈ ಕುರಿತು ಶಾಸಕ ಬೋಪಯ್ಯ ಅವರನ್ನು ಕೇಳಿದಾಗ, ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲೇ ಸಾಕಷ್ಟು ಬೆಡ್ ಗಳ ವ್ಯವಸ್ಥೆ ಇದೆ. ಜೊತೆಗೆ ವಿವಿಧ ಕೋವಿಡ್ ಕೇರ್ ಸೆಂಟರ್ ಗಳಲ್ಲೂ ಬೆಡ್ ಗಳು ಖಾಲಿ ಇವೆ. ಹೀಗಿರುವಾಗ ನಾಪೋಕ್ಲು ಭಾಗಕ್ಕೆ ಕೋವಿಡ್ ಆಸ್ಪತ್ರೆ ಅಗತ್ಯವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಶೇ.50 ರಷ್ಟು ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಆದರೂ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಾದಲ್ಲಿ ತೆರೆಯಲಾಗುವುದು ಎಂದಿದ್ದಾರೆ.