ಚಿಕ್ಕಮಗಳೂರು: ಟ್ರಾನ್ಸ್ ಫರ್ಮರ್ ದುರಸ್ಥಿ ಮಾಡುವಾಗ ವಿದ್ಯುತ್ ಶಾಕ್‍ನಿಂದ ಪವರ್ ಮ್ಯಾನ್ ಕಂಬದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.
27 ವರ್ಷದ ಕಲ್ಲೇಶ್ ಮೃತ ಯುವಕ. ಕಲ್ಲೇಶ್ ಮೂಲತಃ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ನಿವಾಸಿಯಾಗಿದ್ದು, ಕಡೂರು ತಾಲೂಕಿನ ಮೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಟಿಸಿಯಿಂದ ಪವರ್ ಸಪ್ಲೈ ಆಗುತ್ತಿಲ್ಲ ಎಂದು ವಿದ್ಯುತ್ ಕಂಬ ಏರಿದ್ದರು. ಕೆಲಸ ಮಾಡುವಾಗ ವಿದ್ಯುತ್ ಶಾಕ್‍ನಿಂದ ಕಂಬದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಕಲ್ಲೇಶ್ ಮದುವೆಗೆ ನಿಶ್ಚಿತಾರ್ಥ ಕೂಡ ಮುಗಿದಿದ್ದು, ಮದುವೆಗೆ ಇನ್ನೆರಡು ತಿಂಗಳು ಬಾಕಿ ಇತ್ತು. ಎದೆಮಟ್ಟದ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ನೋವು ಮುಗಿಲುಮುಟ್ಟಿದೆ. ಯಗಟಿ ಪೊಲೀಸರು ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ: ಇನ್ನೂ ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗೆಸ್ಟ್ ಹೌಸ್ ಬಳಿ ಬೊಲೇರೋ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನ ಹಳಿಯೂರು ಗ್ರಾಮದ 55 ವರ್ಷದ ನಾಗಪ್ಪಗೌಡ ಎಂದು ಗುರುತಿಸಲಾಗಿದೆ. ಬೈಕ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಗಪ್ಪಗೌಡ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲು ಮುಂದಾದರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.