– ಯುವತಿ ಹತ್ಯೆಗೆ ಯತ್ನಿಸಿ ವಿಫಲ
– ಟಿಕ್ ಟಾಕ್ ನಲ್ಲಿ ಪರಿಚಯವಾಗಿದ್ದ ಕರಣ್
ನವದೆಹಲಿ: ಮದುವೆಯಾಗಲು ನಿರಾಕರಿಸಿದ ಯುವತಿ ಮೇಲೆ ಎರಡು ಮಕ್ಕಳ ತಂದೆಯೊಬ್ಬ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಆರೋಪಿಯನ್ನು ಕರಣ್ ಎಂದು ಗುರುತಿಸಲಾಗಿದ್ದು, ಈತ ಹರಿಯಾಣದ ಸೋನಿಪತ್ ನಿವಾಸಿ. ಘಟನೆಯಿಂದ ಯುವತಿಯ ಹೊಟ್ಟೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸದ್ಯ ನಿಷೇಧವಾಗಿರುವ ಟಿಕ್ ಟಾಕ್ ಮೂಲಕ ಕರಣ್ ಗೆ 10 ತಿಂಗಳ ಹಿಂದೆ ಯುವತಿಯ ಪರಿಚಯವಾಗಿದೆ. ಆರೋಪಿ ಕರಣ್ ಗೆ ಈಗಾಗಲೇ ಮದುಎವಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಈ ವಿಚಾರ ಯುವತಿಗೆ ತಿಳಿದಿರಲಿಲ್ಲ.
ಪರಿಚಯವಾಗಿ ಮೂರು ತಿಂಗಳ ಬಳಿಕ ಕರಣ್ಗೆ ಮದುವೆಯಾಗಿರುವ ವಿಚಾರ ಯುವತಿಗೆ ತಿಳಿದಿದೆ. ಆ ಬಳಿಕದಿಂದ ಆಕೆ ಕರಣ್ ನನ್ನು ದೂರ ಮಾಡಲು ಆರಂಭಿಸಿದ್ದಾಳೆ. ಇತ್ತ ಯುವತಿ ಮನೆಯವರು ಕೂಡ ಆಕೆಗೆ ಹುಡುಗ ಹುಡುಕುತ್ತಿದ್ದರು.
ಯುವತಿಗೆ ಬೇರೆ ಹುಡುಗ ಹುಡುಕುತ್ತಿರುವ ವಿಚಾರ ತಿಳಿದ ಕರಣ್, ನನಗೆ ಸಿಗದೇ ಇರುವುದು ಬೇರೆಯವರಿಗೂ ಸಿಗಬಾರದೆಂಬಂತೆ ಆಕೆಯನ್ನು ಕೊಲೆ ಮಾಡುವ ಪ್ಲಾನ್ ಮಾಡಿದ್ದನು. ಹೀಗಾಗಿ ಮೋಹನ್ ಗಾರ್ಡನ್ ನಿಂದ ಮೋಟಾರ್ ಸೈಕಲ್ ಕದ್ದು ಅದಕ್ಕೆ ನಕಲಿ ನಂಬರ್ ಪ್ಲೇಟ್ ಹಾಕಿದ್ದಾನೆ. ನಂತರ ಪ್ರವೀಣ್ ಎಂಬಾತನ ಬಳಿಯಿಂದ ಸ್ವದೇಶಿ ನಿರ್ಮಿತ ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ಪಡೆದಿದ್ದಾನೆ. ಅಂತೆಯೇ ಶುಕ್ರವಾರ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.
ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.