ಮತ್ತೆ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ- ಮಹಾರಾಷ್ಟ್ರದಿಂದ ಬಂದವರಿಗೆ ಏನು? ಅನ್ಯರಾಜ್ಯದವರಿಗೆ ಏನು?

Public TV
2 Min Read
quarantine BSY

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟಗೊಳ್ಳುತ್ತಿದ್ದಂತೆ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

ಹೌದು. ಕೊರೊನಾ ಸೋಂಕಿತರು ಹೆಚ್ಚಾಗಿರುವ ಮಹಾರಾಷ್ಟ್ರದಿಂದ ಬಂದವರಿಗೆ ಕೇವಲ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಕೋವಿಡ್-19 ಹಾಟ್‍ಸ್ಪಾಟ್‍ಗಳಾದ ತಮಿಳುನಾಡು ಮತ್ತು ದೆಹಲಿಯಿಂದ ಬಂದವರಿಗೆ ಯಾವುದೇ ಸಾಂಸ್ಥಿಕ ಕ್ವಾರಂಟೈನ್ ಮಾಡದೇ ಇರಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

Corona Virus quarantine

ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಪ್ರವೇಶಿಸುವವರು ಕೆಲವು ನಿಯಮಗಳನ್ನು ಪಾಲಿಸಲೇ ಬೇಕಿದೆ. ಕ್ವಾರಂಟೈನ್ ಅವಧಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವವರು 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು. ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳಿಂದ ಆಗಮಿಸುವವರು 14 ದಿನ ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ತಿಳಿಸಿದೆ.

ಹೋಮ್ ಕ್ವಾರಂಟೈನ್ ಎಂದರೆ ಮನೆಯಲ್ಲೇ ಪ್ರತ್ಯೇಕವಾಗಿರುವುದು. ಸಾಂಸ್ಥಿಕ ಕ್ವಾರಂಟೈನ್ ಎಂದರೆ ಸರ್ಕಾರ ನಿಗದಿ ಮಾಡಿದ ಜಾಗದಲ್ಲಿ 14 ದಿನಗಳ ಕಾಲ ವಾಸ್ತವ್ಯ ಇರುವುದು. ಸರ್ಕಾರ ಈಗ ಈ ಹಿಂದೆ ಜಾರಿ ಮಾಡಿದ್ದ ಮಾರ್ಗಸೂಚಿಯನ್ನು ಮತ್ತೆ ಅಳವಡಿಸಲು ಮುಂದಾಗಿದೆ.

Quarantine

ಈ ಕುರಿತು ಜೂನ್ 20ರಂದು ಟ್ವೀಟ್ ಮಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, “ರಾಜ್ಯದಲ್ಲಿ ಶೇ.61.39 ರಷ್ಟು ಕೊರೊನಾ ರೋಗಿಗಳು ಗುಣಮುಖರಾಗುತ್ತಿದ್ದಾರೆ, ಮರಣ ಪ್ರಮಾಣವು ಶೇ.1.49 ರಷ್ಟಿದೆ. 24 ಗಂಟೆಗಳೊಳಗೆ ಕೊರೊನಾ ಪಾಸಿಟಿವ್ ಬಂದ ರೋಗಿ ಪ್ರಕರಣದಲ್ಲಿದ್ದ ಎಲ್ಲರನ್ನೂ ಪತ್ತೆಹಚ್ಚಿ ಕ್ವಾರಂಟೈನ್ ಮಾಡುತ್ತಿದ್ದೇವೆ. ಹಾಗೇ ಅಂತರರಾಜ್ಯದಿಂದ ಆಗಮಿಸಿದರನ್ನು 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುವುದು” ಎಂದು ತಿಳಿಸಿದ್ದರು.

ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನ ಹೊಂದಿರುವ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನ ಏಳು ದಿನ ಸಾಂಸ್ಥಿಕ ಕ್ವಾರಂಟೈನ್, ಏಳು ದಿನ ಹೋಂ ಕ್ವಾರಂಟೈನ್ ಗೆ ಒಳಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಅದೇ ರೀತಿ ದೆಹಲಿ ಮತ್ತು ತಮಿಳುನಾಡಿನಿಂದ ಬರುವ ಪ್ರಯಾಣಿಕರು ಮೂರು ದಿನ ಸಾಂಸ್ಥಿಕ ಕ್ವಾರಂಟೈನ್ ಹನ್ನೊಂದು ದಿನ ಹೋಂ ಕ್ವಾರಂಟೈನ್. ದೇಶದ ಇತರೆ ರಾಜ್ಯಗಳಿಂದ ಅಗಮಿಸುವ ಪ್ರಯಾಣಿಕರು ಕಡ್ಡಾಯ 14 ದಿನ ಹೋಂ ಕ್ವಾರಂಟೈನ್ ಇರಬೇಕೆಂದು ಸುಧಾಕರ್ ಟ್ವೀಟ್ ಮಾಡಿದ್ದರು. ಆದರೆ ಈಗ ಮತ್ತೆ ಕ್ವಾರಂಟೈನ್ ಅವಧಿಯನ್ನು ಬದಲಾವಣೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *