ಹುಬ್ಬಳ್ಳಿ: ಪ್ರೀತಿಸಿದವಳನ್ನು ಮದುವೆಯಾಗಲು ರೆಡಿಯಾಗಿದ್ದ ಪ್ರೇಮಿಗೆ ಯುವತಿಯ ಮನೆಯವರು ಹುಡುಗಿ ಕೊಟ್ಟು ಮದುವೆ ಮಾಡಲ್ಲ ಎಂದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನ ಮದುವೆಯಾಗಬೇಕೆಂದುಕೊಂಡಿದ್ದ ಮಲೀಕ್, ಯುವತಿಯ ಮನೆಯವರ ಒಪ್ಪಿಗೆ ಸಿಗುತ್ತದೆ ಎಂದುಕೊಂಡಿದ್ದ. ಆದರೆ ಮಲೀಕನಿಗೆ ಮದುವೆ ಮಾಡಿಕೊಡಲು ಯುವತಿಯ ಮನೆಯವರ ನಿರಾಕರಿಸಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ ಮಲೀಕ್, ಗೆಳೆಯರಿಗೆ ವಾಟ್ಸಪ್‍ಗೆ ನಾನು ಸಾಯುತ್ತೇನೆ ಎಂದು ಸಂದೇಶ ಕಳಿಸಿದ್ದ.
ತಕ್ಷಣವೇ ಸ್ನೇಹಿತರು ಓಡಿ ಬಂದು ನೋಡಿದಾಗ, ಮಲೀಕ್ ನೇಣು ಹಾಕಿಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದ. ತಕ್ಷಣವೇ ಆತನನ್ನು ಎಲ್ಲರೂ ಸೇರಿಕೊಂಡು ಹಗ್ಗ ಬಿಚ್ಚಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದು, ಜೀವನ್ಮರಣದ ನಡುವೆ ಯುವಕ ಹೋರಾಟ ಮಾಡುತ್ತಿದ್ದಾನೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಲೀಕ್ ಬೇಪಾರಿಗೆ ಕಿಮ್ಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.