– ಜೋಡಿಯ ಪ್ರೀತಿ ಸಂಕೇತವಾದ ಮಗು ಅನಾಥ
– ದುರಂತ ಕಂಡ ಪ್ರೇಮಿಗಳ ಬದುಕು
ಹೈದರಾಬಾದ್: ಪತ್ನಿಯ ಸಾವಿನಿಂದ ನೊಂದ ಪತಿ ತನ್ನ ಹಸುಗೂಸನ್ನ ಬಿಟ್ಟು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.
ಶ್ರವಣ್‍ಕುಮಾರ್ ಮತ್ತು ಅಂಬಿಕಾ ಮೃತ ದಂಪತಿ. ವಿಶಾಖಪಟ್ಟಣಂ ಜಿಲ್ಲೆಯ ಸಿಂಹಾಚಲಂ ಬೆಟ್ಟದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಅನಾರೋಗ್ಯದ ಕಾರಣ ಹೆರಿಗೆಯಾದ ಎರಡು ದಿನಗಳ ನಂತರ ಅಂಬಿಕಾ ಮೃತಪಟ್ಟಿದ್ದಳು. ಪತ್ನಿಯ ಸಾವಿನಿಂದ ನೊಂದಿದ್ದ ಜಲುಮುರಿ ಶ್ರವಣ್‍ಕುಮಾರ್ (20) ಐದು ದಿನಗಳ ನಂತರ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಏನಿದು ಪ್ರಕರಣ?
ಸಿಂಹಗಿರಿ ಗ್ರಾಮ ನಿವಾಸಿ ಶ್ರವಣ್ ಕುಮಾರ್ ಮತ್ತು ಅಂಬಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಇಬ್ಬರು ವಿವಾಹವಾಗಿದ್ದು, ಸಂತೋಷದಿಂದ ಜೀವನ ನಡೆಸುತ್ತಿದ್ದರು. ನಂತರ ಅಂಬಿಕಾ ಗರ್ಭಿಣಿಯಾಗಿದ್ದು, ಇದೇ ತಿಂಗಳ 6 ರಂದು ಹೆರಿಗೆಗಾಗಿ ವಿಶಾಖಪಟ್ಟಣಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.
ಅಂಬಿಕಾ ಈಗಾಗಲೇ ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದಳು. ಹೆರಿಗೆ ಸಂದರ್ಭದಲ್ಲಿ ಅಂಬಿಕಾಗೆ ಪಿಟ್ಸ್ ಬಂದಿದ್ದರಿಂದ ವೈದ್ಯರು ಸಿಸೇರಿಯನ್ ಮಾಡಿದ್ದಾರೆ. ಈ ದಂಪತಿಗೆ ಗಂಡು ಮಗು ಜನಿಸಿತ್ತು. ಆದರೆ ಮಗು ಜನಿಸಿದ ಎರಡು ದಿನಗಳ ನಂತರ ಜುಲೈ 8 ರಂದು ಅಂಬಿಕಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಪತ್ನಿ ಸಾವಿನಿಂದ ಶ್ರವಣ್ ಕುಮಾರ್ ತೀವ್ರ ಬೇಸರಗೊಂಡಿದ್ದನು. ಇದರಿಂದ ನೊಂದು ಕೊನೆಗೆ ಆತನೂ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಶ್ರವಣ್‍ಕುಮಾರ್ ಕುಟುಂಬದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಶ್ರವಣ್ ಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಹಸುಗೂಸು ಈಗ ಅನಾಥವಾಗಿದ್ದು, ಇಬ್ಬರ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.