ಅಗರ್ತಲಾ: ತ್ರಿಪುರದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಅವರು ಮಲಗುವ ಕೋಣೆಯಲ್ಲಿ ಸಮಾಧಿ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
ಪತಿಯನ್ನು ಕೊಲೆ ಮಾಡಿದ ಪತ್ನಿಯನ್ನು ಭಾರತಿ ರೇಂಗ್ (25) ಎಂದು ಗುರುತಿಸಲಾಗಿದೆ. 30 ವರ್ಷದ ಸಂಜಿತ್ ರೇಂಗ್ ಕೊಲೆಯಾದ ಪತಿ. ಭಾರತಿ ತನ್ನ ಗಂಡ ಸಂಜಿತ್ ಅನ್ನು ಮಧ್ಯಾಹ್ನದ ವೇಳೆಗೆ ಕೊಲೆ ಮಾಡಿ ತನ್ನ ಬೆಡ್ ರೂಮಿನಲ್ಲೇ ಸಮಾಧಿ ಮಾಡಿ, ಸಂಜೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
ಭಾರತಿ ನೀಡದ ಹೇಳಿಕೆ ಮೇರೆಗೆ ಪೊಲೀಸರು ಧಲೈ ಜಿಲ್ಲೆಯ ಗಂಡಚೆರಾ ಉಪವಿಭಾಗದ ಹಳ್ಳಿಯೊಂದಕ್ಕೆ ಹೋಗಿ ನೋಡಿದಾಗ ಪತಿಯ ಶವ ಬೆಡ್‍ರೂಮಿನಲ್ಲಿ ದೊರಕಿದೆ. ಶವವನ್ನು ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಭಾರತಿ ಪತಿಯನ್ನು ಹತ್ಯೆ ಮಾಡಲು ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ದಂಪತಿಗೆ ಆರು ವರ್ಷದ ಮಗಳಿದ್ದು, ಭಾರತಿಯನ್ನು ಎಷ್ಟೇ ವಿಚಾರಣೆ ಮಾಡಿದರೂ ಆಕೆ ಗಂಡನ್ನು ಯಾಕೆ ಕೊಂದೆ ಎಂದು ಹೇಳುತ್ತಿಲ್ಲ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.