ನಿನ್ನೆ ಹುಟ್ಟುಹಬ್ಬ ಆಚರಣೆ – ಇಂದು ಹೃದಯಾಘಾತದಿಂದ ಹಿರಿಯ ನಟ ಸಿದ್ಧರಾಜ್ ನಿಧನ

Public TV
1 Min Read
siddaraj kalyankar

ಬೆಂಗಳೂರು: ಕನ್ನಡ ಹಿರಿಯ ಕಲಾವಿದ ಮತ್ತು ಪೋಷಕ ನಟ ಸಿದ್ಧರಾಜ್ ಕಲ್ಯಾಣಕರ್ ಅವರು ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕನ್ನಡದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿರುವ ಸಿದ್ಧರಾಜ್ ಅವರು, ಮೂಲತಃ ಹುಬ್ಬಳ್ಳಿಯವರಾಗಿದ್ದಾರೆ. ಸೋಮವಾರ ತಾನೇ ಧಾರಾವಾಹಿ ಸೆಟ್‍ವೊಂದರಲ್ಲಿ ತಮ್ಮ 60 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ತಡರಾತ್ರಿ ಆಸ್ಪತ್ರೆಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

siddaraju kalyankar 2

ಸಿದ್ಧರಾಜ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿರಾಮ ಮತ್ತು ಪ್ರೇಮಲೋಕ ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದರು. 60 ವರ್ಷದ ಸಿದ್ದರಾಜ್ ತಮ್ಮ ಪತ್ನಿ ಮತ್ತು ಮಗನನ್ನು ಆಗಲಿದ್ದಾರೆ. ಹಿರಿಯ ನಟನ ಸಾವಿಗೆ ನಿರ್ದೇಶಕ ಬಿ ಸುರೇಶ್ ಮತ್ತು ಸೃಜನ್ ಲೋಕೇಶ್ ಅವರು ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿದ್ಧರಾಜ್ ಅವರು, ಶ್ರೀಮಂಜುನಾಥ, ಸೂಪರ್, ಬುದ್ಧಿವಂತ ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾದಲ್ಲಿ ನಟಿಸಿದ್ದರು.

ಸಿದ್ಧರಾಜ್ ಅವರ ಸಾವಿನ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು, ಇದು ಅತ್ಯಂತ ದುರಿತ ಕಾಲ. ಮುಕ್ತದಲ್ಲಿ ತಾತನ ಪಾತ್ರ ಮಾಡಿದ್ದರು. ಭಾರ್ಗವಿ ನಾರಾಯಣ್ ಅಜ್ಜಿ, ಇವರು ತಾತ. ಈ ಧಾರಾವಾಹಿಯಲ್ಲಿ ಈ ಜೋಡಿಯ ದೃಶ್ಯಗಳನ್ನು ವೀಕ್ಷಕರು ತುಂಬಾ ಇಷ್ಟ ಪಡುತ್ತಿದ್ದರು. ಅನನ್ಯ ರೀತಿಯ ಕಲಾವಿದ. ತುಂಬಾ ಸಜ್ಜನ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದವರಲ್ಲ, ಕೋಪ ಮಾಡಿಕೊಂಡವರಲ್ಲ. ಮುಖದ ಮೇಲೆ ಸದಾ ಮುಗುಳುನಗೆ. ಅಪರೂಪದ ಮನುಷ್ಯರಲ್ಲಿ ಒಬ್ಬ ಎಂದಿದ್ದಾರೆ.

https://www.facebook.com/talagavar.seetaram/posts/10223678134520836

ಜೊತೆಗೆ ನಿನ್ನೆಯ ದಿನವೇ ಅವರ ಹುಟ್ಟುಹಬ್ಬ. ನಮ್ಮ ಸಂಸ್ಥೆಯಲ್ಲಿ ಶುರುವಾಗಲಿರುವ ಹೊಸ ಧಾರಾವಾಹಿಯಲ್ಲೂ ಇವರಿಗೆ ಒಂದು ಮುಖ್ಯ ಪಾತ್ರ ಕೊಡಬೇಕೆಂದು ತೀರ್ಮಾನ ವಾಗಿತ್ತು. ಅಷ್ಟರಲ್ಲಿ ಈ ಹೃದಯಾಘಾತ ಬಹಳ ಕೆಟ್ಟ ಕಾಲ. ತೀರಾ ಬೇಸರ ನೋವು ಆಗುತ್ತಿದೆ. ಹೋಗಿ ಬನ್ನಿ ಸಿದ್ಧರಾಜ್ ಕಲ್ಯಾಣಕರ್ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *