– ಕೊರೊನಾ ಲಾಕ್‍ಡೌನ್‍ನಲ್ಲಿ ಪತ್ನಿಯನ್ನು ಊರಿಗೆ ಕಳುಹಿಸಿದ್ದ ಎಂಜಿನಿಯರ್
– ತನ್ನ ಬದಲು ಬೇರೆಯವರನ್ನು ವಿಮಾನದಲ್ಲಿ ಕಳುಹಿಸಿದ್ದ ನಿತಿನ್
ತಿರುವನಂತಪುರಂ: ದುಬೈನಲ್ಲಿ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ ಮರುದಿನವೇ ಆತನ ಪತ್ನಿ ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಕೋಝಿಕೋಡ್‍ನಲ್ಲಿ ನಡೆದಿದೆ.
ಮೃತಪಟ್ಟ ಪತಿಯನ್ನು ಕೇರಳದ ನಿವಾಸಿ 28 ವರ್ಷದ ನಿತಿನ್ ಚಂದ್ರನ್ ಎಂದು ಗುರುತಿಸಲಾಗಿದೆ. ನಿತಿನ್ ಸೋಮವಾರ ದುಬೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದಾದ ಒಂದೇ ದಿನದಲ್ಲಿ ಮಂಗಳವಾರ ಆತನ ಪತ್ನಿ 27 ವರ್ಷದ ಅದೀರಾ ಗೀತಾ ಶ್ರೀಧರನ್ ಕೇರಳದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಮೆಕ್ಯಾನಿಕಲ್ ಎಂಜಿನಿಯರ್ ನಿತಿನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ತನ್ನ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ವಾಪಸ್ ಕಳುಹಿಸಲು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದಾದ ನಂತರ ಒಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಇಂಡಿಯಾಗೆ ಬಂದ ಮೊದಲ ವಿಮಾನದಲ್ಲಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ ಅವರು ಅಲ್ಲೇ ಉಳಿದುಕೊಂಡಿದ್ದರು.
ದುಬೈನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಿತಿನ್ ಅಲ್ಲಿನ ರಕ್ತದಾನ ಸಂಘದ ಸದಸ್ಯರು ಆಗಿದ್ದರು. ಪತ್ನಿ ಅದೀರಾಳ ಜೊತೆಯಲ್ಲಿ ವಾಪಸ್ ಬರಬೇಕಿದ್ದ ನಿತಿನ್ ದುಬೈನಲ್ಲಿ ಸಿಲುಕಿದ್ದ ಭಾರತದ ಬಡವರನ್ನು ಇವರ ಜಾಗದಲ್ಲಿ ಇಂಡಿಯಾಗೆ ಕಳುಹಿಸಿಕೊಟ್ಟಿದ್ದರು. ಅವರ ಪ್ರಯಾಣದ ವೆಚ್ಚವನ್ನು ಕೂಡ ಅವರೇ ಭರಿಸಿದ್ದರು. ನಂತರ ನನಗೆ ಚಾನ್ಸ್ ಸಿಗುತ್ತೆ ಆಗ ನಾನು ಭಾರತಕ್ಕೆ ಬರುತ್ತೇನೆ ಎಂದು ಹೇಳಿದ್ದರು.
ಆದರೆ ವಿಧಿಯಾಟವೇ ಬೇರೆಯಾಗಿತ್ತು. ದುಬೈನಲ್ಲಿ ಏಕಾಂಗಿಯಾದ್ದ ನಿತಿನ್ ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮುಂಚೆಯಿಂದಲು ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ನಿತಿನ್ ಇದಕ್ಕಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಸೋಮವಾರ ಮಲಗಿದ್ದವರು ಏಳಲೇ ಇಲ್ಲ. ಅವರು ನಿದ್ರೆಯಲ್ಲಿ ಇರುವಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
https://www.facebook.com/publictv/posts/4369546059729779