ಚಿಕ್ಕಮಗಳೂರು: ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ರಾಷ್ಟ್ರೀಯ ಹೆದ್ದಾರಿ 173ರಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಾಲಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಬಳಿ ನಡೆದಿದೆ.
ಮಲೆನಾಡು ಭಾಗದಲ್ಲೂ ತೌಕ್ತೆ ಚಂಡಮಾರುತದ ಎಫೆಕ್ಟ್ ಜೋರಾಗಿಯೇ ಇದೆ. ಚಂಡಮಾರುತದ ಪರಿಣಾಮ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೆಳಗ್ಗಿಯಿಂದಲೂ ಬಿಟ್ಟುಬಿಡದೇ ಮಳೆ ಸುರಿಯುತ್ತಿದೆ. ಬಿದರಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಒಂದೇ ಕಡೆ ಬರೋಬ್ಬರಿ 10 ದೊಡ್ಡ-ದೊಡ್ಡ ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಭಾಗದಲ್ಲಿ ಶನಿವಾರ ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣವಿದ್ದು, ಇಡೀ ದಿನ ತುಂತುರು ಮಳೆ ಸುರಿದಿತ್ತು. ಮಲೆನಾಡ ಕೆಲ ಭಾಗದಲ್ಲಿ ಭಾರೀ ಮಳೆ ಸುರಿದಿತ್ತು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ನಿಡುವಾಳೆ, ಗಬ್ಗಲ್, ಜಾವಳಿ, ಹೊರಟ್ಟಿ, ಕೆಳಗೂರು, ಸುಂಕಸಾಲೆ, ಭಾರತೀಬೈಲು ಸೇರಿದಂತೆ ಹಲವೆಡೆ ಭಾರೀ ಗಾಳಿಯೊಂದಿಗೆ ಉತ್ತಮ ಮಳೆ ಸುರಿದಿತ್ತು. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಉತ್ತಮ ಮಳೆಯಾಗಿದೆ.
ನಿನ್ನೆ ಸಂಜೆವರೆಗೂ ತುಂತುರು ಮಳೆ ಸುರಿದ ಮಳೆ ರಾತ್ರಿ ವೇಳೆಗೆ ಮಲೆನಾಡು ಭಾಗದಲ್ಲಿ ಇಡೀ ರಾತ್ರಿ ಒಂದೇ ಸಮನೆ ಸುರಿದಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಹಳ್ಳಿಗರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಶನಿವಾರ ರಾತ್ರಿಯಿಂದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮೂಡಿಗೆರೆ ಸುತ್ತಮುತ್ತ ಒಂದೇ ದಿನಕ್ಕೆ ಸುಮಾರು 8 ರಿಂದ 10 ಇಂಚು ಮಳೆ ಸುರಿದಿದೆ. ಮಳೆಯ ಅಬ್ಬರದ ಜೊತೆಗೆ ಬಿರುಗಾಳಿಯ ಹೊಡೆತಕ್ಕೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇಂದು ಕೂಡ ಮೂಡಿಗೆರೆಯ ದಾರದಹಳ್ಳಿ, ಬೈರಾಪುರ, ಚಾರ್ಮಾಡಿ ಘಾಟ್ ವ್ಯಾಪ್ತಿ ಸೇರಿದಂತೆ ಕೊಟ್ಟಿಗೆಹಾರ, ಬಾಳೂರು, ಜಾವಳಿ ಭಾಗದಲ್ಲೂ ಹೆಚ್ಚಿನ ಮಳೆಯಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ತರೀಕೆರೆಯಲ್ಲಿ ಹಲವಡೆ ಮಳೆ ಸುರಿದಿದೆ.