ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ತಾಳಿ ಕಟ್ಟಿಸಿಕೊಳ್ಳಲು ಒಪ್ಪದಿದ್ದಕ್ಕೆ ಪ್ರಿಯತಮೆಯನ್ನು ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಪ್ರಕಾಶ್ ನಗರದ 19 ವರ್ಷದ ಯುವತಿ ಕೊಲೆಯಾಗಿದ್ದು, ಆರೋಪಿಯನ್ನು ರಾಜಾಜಿನಗರ ರೌಡಿಶೀಟರ್ ಅಭಿಗೌಡ ಎಂದು ಗುರುತಿಸಲಾಗಿದೆ. ಗಿರಿನಗರದ ದ್ವಾರಕನಗರ ಸೆಂಟ್ ಪೀಟರ್ಸ್ ಶಾಲೆ ಬಳಿ ಈ ಘಟನೆ ನಡೆದಿದೆ. ರೌಡಿಶೀಟರ್ ಅಭಿಗೌಡ ರಾಜಾಜಿನಗರದಿಂದ ಗಿರಿನಗರಕ್ಕೆ ಯುವತಿಯನ್ನು ಕರೆದುಕೊಂಡು ಹೋಗಿ ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಅಂದಿದ್ದಕ್ಕೆ ಕೊಲೆ ಮಾಡಿದ್ದಾನೆ.
ಏನಿದು ಪ್ರಕರಣ?
ರೌಡಿಶೀಟರ್ ಅಭಿಗೌಡ ಮತ್ತು ಯುವತಿ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ವಾಸವಿದ್ದರು. ಒಂದೇ ಏರಿಯಾ ಆಗಿದ್ದ ಇಬ್ಬರು ಪರಸ್ವರ ಪ್ರೀತಿ ಮಾಡುತ್ತಿದ್ದರು. ಸೋಮವಾರ ಸಂಜೆ ಆರೋಪಿ ಅಭಿಗೌಡ ಯುವತಿಗೆ ಫೋನ್ ಮಾಡಿ ಹೊರಗಡೆ ಬರುವಂತೆ ಕೇಳಿಕೊಂಡಿದ್ದನು. ಅದರಂತೆಂಯೇ ಆರೋಪಿ ಅಭೀಗೌಡ ತಾಳಿ ಸಮೇತ ಮದುವೆಯಾಗಲು ಯುವತಿಯನ್ನ ಗಿರಿನಗರ ಸ್ನೇಹಿತರ ಮನೆಗೆ ಕರೆದುಕೊಂಡು ಹೋಗಿದ್ದನು.
ಈ ವೇಳೆ ಅಭಿಗೌಡ ಯುವತಿಗೆ ತಾಳಿ ಕಟ್ಟಲು ಮುಂದಾಗಿದ್ದಾನೆ. ಆಗ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದಾನೆ. ಇತ್ತ ಯುವತಿ ಪೋಷಕರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಯುವತಿಯನ್ನ ಕೊಲೆ ಮಾಡಿದ ಬಳಿಕ ರಾಜಾಜಿನಗರ ಪೊಲೀಸ್ ಠಾಣೆಗೆ ಹೋಗಿ ಆರೋಪಿ ಅಭಿಗೌಡ ಸರೆಂಡರ್ ಆಗಿದ್ದಾನೆ. ರಾಜಾಜಿನಗರ ಪೊಲೀಸರು ಆತನನ್ನು ಗಿರಿನಗರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.