ಬೆಂಗಳೂರು: ಜುಲೈ 18 ರಿಂದ 22ರವರೆಗೆ ಕರ್ನಾಟಕದ ಹಲವು ಕಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ರಾಜ್ಯದಲ್ಲಿ ಮಾನ್ಸೂನ್ ಮತ್ತಷ್ಟು ಚುರುಕಾಗಿದೆ. ಇಲ್ಲಿವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 21 ಸೆ.ಮೀ, ದಾವಣಗೆರೆ 20 ಸೆ.ಮೀ, ಸಿರಾದಲ್ಲಿ 18 ಸೆ.ಮೀ ಮಳೆಯಾಗಿದೆ. ಮಾನ್ಸೂನ್ ರಾತ್ರಿಯಿಂದ ಮತ್ತೆ ಚುರುಕುಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜು.22ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಶ್ರುತಿ ಹಾಸನ್ ಕಿಸ್
ಬಾಗಲಕೋಟೆ, ವಿಜಯಪುರ, ದಾವಣಗೆರೆ, ಕೊಪ್ಪಳ, ಬೀದರ್‍ನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಕೇರಳದಿಂದ ಮಹಾರಾಷ್ಟ್ರದೆಡೆಗೆ ವೇಗವಾದ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ. ಇದರ ಪ್ರಭಾವದಿಂದಾಗಿ ರಾಜ್ಯ ಕರಾವಳಿ ಭಾಗದಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗಲಿದೆ. ಜೊತೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಸಾಕಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ದೀರ್ಘಕಾಲದವರೆಗೆ ಮುಂದುವರೆಯಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.