ರಾಯಚೂರು: ಲಿಂಗಸುಗೂರು ತಾಲೂಕಿನ ಗೊಲಪಲ್ಲಿ ಬಳಿಯ ಗುಂಡಲಬಂಡಾ ಜಲಪಾತ ನೋಡಲು ಹೋಗಿ ತಂದೆ, ಮಗ ಜಾರಿಬಿದ್ದು ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದಾರೆ. ಇನ್ನೋರ್ವ ಯುವಕ ಕಲ್ಲು ಬಂಡೆಯ ಆಸರೆ ಪಡೆದು ನಿಂತಿದ್ದರಿಂದ ಆತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೂ ರಕ್ಷಣೆ ಮಾಡಿದ್ದಾರೆ.
ದೇವದುರ್ಗ ತಾಲೂಕಿನ ಮೂರು ಜನ ಜಲಪಾತ ನೋಡಲು ಹೋಗಿದ್ದರು. ಆದರೆ ನೀರಿನ ಪ್ರಮಾಣ ಹಾಗೂ ಸೆಳೆತ ಹೆಚ್ಚಾಗಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಅದೃಷ್ಟವಶಾತ್ 18 ವರ್ಷದ ಯುವಕ ಮಹಾಂತೇಶ್‍ನನ್ನ ರಕ್ಷಿಸಲಾಗಿದೆ. ಆದರೆ 5 ವರ್ಷದ ಧನುಷ್ ಹಾಗೂ ಅವನ ತಂದೆ 35 ವರ್ಷದ ಕೃಷ್ಣಪ್ಪ ನಾಪತ್ತೆಯಾಗಿದ್ದಾರೆ.
Advertisement
Advertisement
ಕಲ್ಲು ಬಂಡೆಗಳೇ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಬೋಟ್ ಬಳಸುವುದು ಅಸಾಧ್ಯವಾಗಿದೆ. ಹೀಗಾಗಿ ಹಗ್ಗದ ಮೂಲಕ ಬಂಡೆ ಮೇಲೆ ನಿಂತಿದ್ದ ಮಹಾಂತೇಶ್ ನನ್ನ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಗ್ಗ ಹಿಡಿದು ನೀರಿನಲ್ಲಿ ಬರಲು ಮೊದಲು ಹೆದರಿದ ಯುವಕನಿಗೆ ಧೈರ್ಯ ತುಂಬಿ ರಕ್ಷಣೆ ಮಾಡಲಾಗಿದೆ. ಆದರೆ ನೀರಿನ ರಭಸ ಹೆಚ್ಚಾಗಿರುವುದರಿಂದ ನಾಪತ್ತೆಯಾಗಿರುವ ತಂದೆ ಮಗುವಿನ ಪತ್ತೆಕಾರ್ಯ ಕಠಿಣ ಸವಾಲಾಗಿದೆ.
Advertisement
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಜಲಪಾತ ಬೋರ್ಗರೆಯುತ್ತಿದೆ. ದುರ್ಗಮ ಹಾದಿಯಲ್ಲಿರುವ ಜಲಪಾತ ನೋಡಲು ಹೋಗಿ ತಂದೆ ಮಗ ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಹಟ್ಟಿ ಠಾಣೆ ಪೋಲಿಸರಿಂದ ಪತ್ತೆ ಕಾರ್ಯ ನಡೆದಿದೆ.