ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ 96 ವರ್ಷದ ಅಜ್ಜಿ ಕೊರೊನ ಲಸಿಕೆ ಹಾರಿಸಿಕೊಳ್ಳುವ ಮೂಲಕವಾಗಿ ಮಾದರಿಯಾಗಿದ್ದಾರೆ.
ಬಳ್ಳಾರಿಯ ಕೌಲಬಜಾರ್ ನಿವಾಸಿಯಾದ ಗಂಗಮ್ಮಾ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಬಂದು ಲಸಿಕೆ ಪಡೆದಿದ್ದಾರೆ. ಯಾವುದೇ ಕಾಯಿಲೆ ಇಲ್ಲದಿರುವ ಅಜ್ಜಿ ತನ್ನ ಮೊಮ್ಮಕ್ಕಳ ಜೊತೆಯಲ್ಲಿ ಬಂದು ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಮೂಲಕವಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಲಸಿಕೆ ನೀಡಿದ ಬಳಿಕ ಅವರ ಆರೋಗ್ಯ ಪರೀಕ್ಷೆಮಾಡಿದ್ದಾರೆ. ಯಾವುದೇ ಸುಸ್ತು ಆಯಾಸ ಕಾಣದ ಅಜ್ಜಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಲಸಿಕೆ ಪಡೆಯಲು ಬಂದ ಅಜ್ಜಿಯ ಉತ್ಸಾಹಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಎರಡನೇ ಹಂತದ ಕೋವಿಡ್ ಲಸಿಕೆ ಹಂಚಿಕೆ ಅಭಿಯಾನ ಈಗಾಗಲೇ ಆರಂಭವಾಗಿದೆ. 60 ವರ್ಷದ ಮೇಲ್ಪಟ್ಟ ಜನರಿಗೆ ಕೋವಿಡ್ ಲಸಿಕೆ ಹಾಕಲಾಗುತ್ತಿದೆ.