ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ನಿದ್ದೆಯಿಂದ ಎಚ್ಚೆತ್ತಿದೆ. ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಮಾಹಿತಿ ನೀಡದೇ ಇದ್ದ ರಾಜ್ಯ ಸರ್ಕಾರ ಇನ್ನು ಮುಂದೆ ನಿಮ್ಮ ರಿಪೋರ್ಟ್ ನೆಗೆಟಿವ್ ಆದರೂ ಅದರ ಫಲಿತಾಂಶದ ಎಸ್‍ಎಂಎಸ್ ನಿಮ್ಮ ಮೊಬೈಲ್‍ಗೆ ಬರಲಿದೆ. ಹೀಗಾಗಿ ಇನ್ನು ಮುಂದೆ ಯಾರೂ ಆತಂಕದಲ್ಲಿ ದಿನ ದೂಡಬೇಕಾಗಿಲ್ಲ.
ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಡಾ.ಅರುಂಧತಿ ಚಂದ್ರಶೇಖರ್ ಅವರು ಜುಲೈ 18ರಂದು ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲಾ ಕೋವಿಡ್-19 ಪ್ರಯೋಗಾಲಯಗಳ ನೋಡಲ್ ಅಧಿಕಾರಿಗಳು ಕೋವಿಡ್-19 ಸೋಂಕಿಲ್ಲದ (ನೆಗೆಟಿವ್) ವ್ಯಕ್ತಿಗಳ ಫಲಿತಾಂಶ ಬಂದ ಕೂಡಲೇ ಸಂಬಂಧಪಟ್ಟವರಿಗೆ ಎಸ್‍ಎಂಎಸ್ ಮುಖಾಂತರ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರವಾನಿಸಲು ಸೂಚಿಸಿದ್ದಾರೆ.
Advertisement
Advertisement
ಮೆಸೇಜ್‍ನಲ್ಲಿ ಏನಿರುತ್ತೆ..?
ಕನ್ನಡ: ಎಸ್.ಆರ್.ಎಫ್ ಐಡಿ: ಎಕ್ಸ್‌ವೈಝಡ್, ಫಲಿತಾಂಶ: ಕೋವಿಡ್-19 ಸೋಂಕಿಲ್ಲ (ನೆಗೆಟಿವ್). ಜ್ವರ, ಕೆಮ್ಮು ಅಥವಾ ಉಸಿರಾಟ ತೊಂದರೆಯ ಲಕ್ಷಣಗಳು ಕಂಡು ಬಂದಲ್ಲಿ, ಉಚಿತ ಸಹಾಯವಾಣಿ 14410 ಅಥವಾ 104ಗೆ ಕರೆ ಮಾಡಿ.
Advertisement
ಇಂಗ್ಲಿಷ್: SRF ID: XYZ, Result: Negative. If you develop any symptoms like Fever, Cough, Breathlessness, call Toll free Helplines 14410 or 104
Advertisement
ಈ ಹಿಂದೆ ಏನಾಗುತ್ತಿತ್ತು?: ರಾಜ್ಯದಲ್ಲಿ ಈವರೆಗೆ ಪಾಸಿಟಿವ್ ಬಂದವರಿಗೆ ಮಾತ್ರ ಫೋನ್ ಕಾಲ್ ಅಥವಾ ಎಸ್‍ಎಂಎಸ್ ಮೂಲಕ ಸಂದೇಶ ರವಾನೆಯಾಗುತ್ತಿತ್ತು. ಆದರೆ ಫಲಿತಾಂಶ ನೆಗೆಟಿವ್ ಬಂದವರಿಗೆ ಮಾತ್ರ ಯಾವುದೇ ಮಾಹಿತಿ ಕೊಡುತ್ತಿರಲಿಲ್ಲ. ಇದು ಟೆಸ್ಟ್‌ಗೆ ಹೋಗಿ ಫಲಿತಾಂಶಕ್ಕಾಗಿ ಕಾಯುತ್ತಿದ್ದವರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಮಾಡುತ್ತಿತ್ತು.
ಟೆಸ್ಟ್ ಮಾಡಿಸಿದವರು ತಮ್ಮ ವರದಿ ಏನಾಗಿದೆ ಎಂದು ತಿಳಿಯಲು ಟೆಸ್ಟ್ ಸ್ಯಾಂಪಲ್ ಕೊಟ್ಟಲ್ಲಿಗೇ ಹೋಗಬೇಕಿತ್ತು. ಆದರೆ ಸರ್ಕಾರ ಮಾತ್ರ ಟೆಸ್ಟ್ ಕೊಟ್ಟವರು ಫಲಿತಾಂಶ ಬರುವವರೆಗೆ ಮನೆಯಲ್ಲೇ ಇರಬೇಕು ಎಂದು ಆದೇಶಿಸಿತ್ತು. ಆದರೆ ಕೆಲವು ಬಾರಿ 4-5 ದಿನ ಕಳೆದರೂ ಫಲಿತಾಂಶ ಬರುತ್ತಿರಲಿಲ್ಲ. ಹೀಗಾಗಿ ಎರಡು ಮೂರು ಬಾರಿ ರಿಸಲ್ಟ್ ಪಡೆಯಲು ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಟೆಸ್ಟ್ ಕೊಟ್ಟವರು ಹಾಗೂ ಕುಟುಂಬಸ್ಥರು ಏನಾಗುತ್ತೋ ಏನೋ ಎಂದು ಗೊಂದಲದಲ್ಲೇ ಕಾಲ ಕಳೆಯುತ್ತಿದ್ದರು. ಸರ್ಕಾರದ ಈ ನಿರ್ಧಾರದಿಂದಾಗಿ ಟೆಸ್ಟ್ ಕೊಟ್ಟವರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.