ಮಡಿಕೇರಿ: ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಜುಲೈ 5ರ ಬಳಿಕವೂ ಕೊಡಗು ಜಿಲ್ಲೆ ಅನ್‍ಲಾಕ್ ಆಗೋದು ಬಹುತೇಕ ಡೌಟ್. ಈ ಕುರಿತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ ಹಂಚಿಕೊಂಡಿದ್ದು, ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗದಿದ್ದರೆ ಲಾಕ್‍ಡೌನ್ ತೆರವುಗೊಳಿಸುವುದು ಬೇಡ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜೀವನಕ್ಕಿಂತ ಜೀವ ಮುಖ್ಯ. ಹೀಗಾಗಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆ ಆಗದಿದ್ದರೆ, ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಸುವುದು ಅನಿವಾರ್ಯ ಎಂದು ಕೆ.ಜಿ.ಬೋಪಯ್ಯ ಅವರು ಲಾಕ್‍ಡೌನ್ ಮುಂದುವರಿಯುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಸುಳಿಯಲ್ಲಿ ಕೊಡಗು- ರಾಜ್ಯದಲ್ಲಿಂದು 3,382 ಮಂದಿಗೆ ಪಾಸಿಟಿವ್
ಇತ್ತರೆ ಜಿಲ್ಲೆಗಳಲ್ಲಿ ಅನ್‍ಲಾಕ್ ಅಗಿರುವುದರಿಂದ ಲಾಕ್‍ಡೌನ್ ಆಗಿರುವ ಕೊಡಗು ಜಿಲ್ಲೆಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿರುವುದರಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಗಡಿ ಭಾಗದಲ್ಲಿಯೂ ಹೆಚ್ಚಾಗಿ ಹೊರ ರಾಜ್ಯದ ಜನರನ್ನು ತಪಾಸಣೆ ನಡೆಸದಿರುವುದರಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ. ಅಲ್ಲದೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಹಾಗೆಯೇ ನಮ್ಮ ಜಿಲ್ಲೆಯಲ್ಲೂ ಅನ್‍ಲಾಕ್ ಮಾಡಬೇಕು ಎಂದು ಜಿಲ್ಲೆಯಲ್ಲಿ ಕೆಲವರು ಹೇಳುತ್ತಿದ್ದಾರೆ.
ಕೊಡಗಿನಲ್ಲಿ ಇಂದು 209 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.9.08 ಕ್ಕೆ ಹೆಚ್ಚಳವಾಗಿದೆ. ಈ ಹಿನ್ನೆಲೆ ಅನ್‍ಲಾಕ್ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಬಲವಾಗಿ ಕೇಳಿಬರುತ್ತಿದೆ.