ಮುಂಬೈ: ಇಡೀ ಭಾರತ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದು ‘ಕೆಜಿಎಫ್’ ಸಿನಿಮಾ. ಇನ್ನೂ ಕೆಜಿಎಫ್-2 ಸಿನಿಮಾ ಕೂಡ ಬಿಡುಗಡೆಯ ಮೊದಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದೀಗ ನಟಿ ರವೀನಾ ಟಂಡನ್ ಸಿನಿಮಾದಲ್ಲಿ ತಮ್ಮ ಪಾತ್ರದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ಚೆಲುವೆ ರವೀನಾ ಟಂಡನ್ ಈಗಾಗಲೇ ‘ಕೆಜಿಎಫ್-2’ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದ ಚಿತ್ರೀಕರಣ ಮುಗಿಸಿದ್ದಾರೆ. ಆದರೆ ನಟಿ ರವೀನಾ, ಮಾಧ್ಯಮವೊಂದರಲ್ಲಿ ತಾವು ತೊಡಗಿಕೊಂಡಿರುವ ಕಾರ್ಯಗಳ ಬಗ್ಗೆ ಮಾತನಾಡುತ್ತಾ ‘ಕೆಜಿಎಫ್’ ಸಿನಿಮಾದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ನಾನೇ ಹೀರೋ, ನಾನೇ ವಿಲನ್ ಎಂದು ಹೇಳಿದ್ದಾರೆ.
“ಕೆಜಿಎಫ್ ಸಿನಿಮಾದಲ್ಲಿ ನಾನು ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದು ತುಂಬ ಪವರ್ ಫುಲ್ ಪಾತ್ರವಾಗಿದೆ. ಅಲ್ಲದೇ ಬಹಳ ಕುತೂಹಲ ಹೊಂದಿರುವ ಈ ಸಿನಿಮಾದಲ್ಲಿ ಅವಳೇ ಹೀರೋ ಆಗಿರುತ್ತಾಳೆ. ಹಾಗೆಯೇ ವಿಲನ್ ಕೂಡ ಅವಳೇ ಆಗಿರುತ್ತಾಳೆ. ಕೆಜಿಎಫ್ ಸಿನಿಮಾ ಕಥೆ ತುಂಬಾ ಆಸಕ್ತಿದಾಯಕವಾಗಿದೆ” ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
‘ಕೆಜಿಎಫ್ ಚಾಪ್ಟರ್ 1’ ರಲ್ಲಿ ರಮಿಕಾ ಸೇನ್ ಮತ್ತು ಅಧೀರ ಪಾತ್ರಗಳ ಸಣ್ಣ ಸುಳಿವು ನೀಡಲಾಗಿತ್ತು. ಆ ಪಾತ್ರಗಳನ್ನು ತೆರೆ ಮೇಲೆ ತೋರಿಸಿದ್ದರೂ ಕೂಡ ಅವುಗಳನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಕಾಯ್ದುಕೊಳ್ಳಲಾಗಿತ್ತು. ಈಗ ರಮಿಕಾ ಸೇನ್ ಪಾತ್ರವನ್ನು ರವೀನಾ ನಿಭಾಯಿಸಿದರೆ, ಅಧೀರ ಪಾತ್ರವನ್ನು ನಟ ಸಂಜಯ್ ದತ್ ಮಾಡಿದ್ದಾರೆ. ಬಾಲಿವುಡ್‍ನ ಈ ಇಬ್ಬರು ಕಲಾವಿದರು ಈಗಾಗಲೇ ಶೂಟಿಂಗ್‍ನಲ್ಲಿ ಪಾಲ್ಗೊಂಡು ವಾಪಸ್ಸಾಗಿದ್ದಾರೆ.