ಕಚೇರಿಯಲ್ಲಿ ಬೇರೆಯಾದ್ರೂ ಮನೆಯಲ್ಲಿ ಒಂದೇ ಪಕ್ಷ – ತಾ.ಪಂ. ಬಿಜೆಪಿ ಅಧ್ಯಕ್ಷೆ, ಕಾಂಗ್ರೆಸ್‌ ಉಪಾಧ್ಯಕ್ಷರ ಪ್ರೇಮ ಮೈತ್ರಿ

Public TV
2 Min Read
kalaburagi bjp congress marriage 3

– ನಿಶ್ಚಿತಾರ್ಥ ಮಾಡಿದ ಬಳಿಕ ಗೊತ್ತಾಯ್ತು ಪ್ರೀತಿ
– ಸರಳ ವಿವಾಹವಾದ ಜೋಡಿ

ಕಲಬುರಗಿ:  ದೇಶದಲ್ಲಿ ರಾಜಕೀಯ ಹೆಚ್ಚಾಗುತ್ತಿದೆ. ಆತ ಕಾಂಗ್ರೆಸ್, ಈತ ಬಿಜೆಪಿ, ಮತ್ತೋರ್ವ ಮತ್ತೊಂದು ಪಾರ್ಟಿಯವನು ಅಂತ  ಪಕ್ಷದ ಜೊತೆ ಜನರನ್ನು ಗುರುತಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ಕೂಡಾ ಪಕ್ಷದ ಕಾರ್ಯಕರ್ತರ ನಡುವೆ ಜಗಳಗಳು ಕೂಡಾ ಹೆಚ್ಚಾಗಿವೆ. ಆದರೆ ಇದೆಲ್ಲವನ್ನು ಮೀರಿಸುವ ಶಕ್ತಿಗೆ ಪ್ರೀತಿಗೆ ಇದ್ದು, ಆಗಾಗ ಇದು ಸಾಬೀತು ಕೂಡಾ ಆಗುತ್ತಿರುತ್ತದೆ. ಈ ರೀತಿ ಪಕ್ಷವನ್ನು ಮೀರಿ ಸ್ನೇಹ ಗೆದ್ದು ‘ಪ್ರೇಮ ಮೈತ್ರಿ’ಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಆಗಿದೆ.

ಹೌದು. ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ತಮ್ಮ ರಾಜಕೀಯವನ್ನು ಮೀರಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ನಡೆದ ಸರಳ ವಿವಾಹದಲ್ಲಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.

BJP Congress

ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಮತ್ತು ತಾಲೂಕು ಪಂಚಾಯತ್ ಉಪಾಧ್ಯಕ್ಷ ಭೀಮಾಶಂಕರ್ ಹೊನ್ನಿಕೇರಿ ವಿವಾಹವಾಗುವ ಮೂಲಕ  ಪ್ರೀತಿ, ರಾಜಕೀಯ ಪಕ್ಷಕ್ಕಿಂತ ದೊಡ್ಡದು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.  ತಾಲೂಕು ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಬಿಜೆಪಿಯಿಂದ ಗೆದ್ದು ಅಧ್ಯಕ್ಷರಾಗಿದ್ದರೆ, ಭೀಮಾಶಂಕರ್ ಹೊನ್ನಿಕೇರಿ ಕಾಂಗ್ರೆಸ್ಸಿನಿಂದ ಗೆದ್ದು ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಆದರೆ ಈಗ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ನಡುವೆ ವಿವಾಹ ಬಂಧನವಾಗಿದೆ. ತಾಲೂಕು ಪಂಚಾಯತ್ ನಲ್ಲಿ ಮೈತ್ರಿ ಇಲ್ಲದಿದ್ದರೂ ಜೀವನದ ಪಯಣದಲ್ಲಿ ಮೈತ್ರಿ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

kalaburagi bjp congress marriage 4

ತಾಲೂಕಿನ ಬೇರೆ ಬೇರೆ ಕ್ಷೇತ್ರಗಳಿಂದ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಇವರು ತಮ್ಮ ನಾಯಕರ ಆಶೀರ್ವಾದದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು. ಹೀಗಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ತಾಲೂಕು ಪಂಚಾಯತ್ ಸಭೆಯಲ್ಲಿ ತಮ್ಮ ತಮ್ಮ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದ ಇವರಿಬ್ಬರ ನಡುವೆ ಸ್ನೇಹ ಹೆಚ್ಚಾಗಿತ್ತು. ಈ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿತ್ತು.

kalaburagi bjp congress marriage

ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡು ಕುಟುಂಬದವರು ಮಾತನಾಡಿ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಇವರ ಮಧ್ಯೆ ಪ್ರೀತಿ ಇದೆ ಮದುವೆಯಾಗುತ್ತಾರೆ ಎಂಬ ವಿಚಾರ ತಾಲೂಕಿನ ಜನರಿಗೂ ತಿಳಿದಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಾಗಲೇ ಇಬ್ಬರ ಪ್ರೀತಿ ಗೊತ್ತಾಗಿತ್ತು.

ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಈ ಪ್ರೇಮ ಮೈತ್ರಿಯ ವಿವಾಹಕ್ಕೆ ರಾಜಕೀಯ ನಾಯಕರು ಕೂಡಾ ಶುಭ ಹಾರೈಸಿದ್ದಾರೆ. ಇನ್ನು ಮುಂದೆ ಕಚೇರಿಯಲ್ಲಿ ಪಕ್ಷ ಬೇರೆಯಾದರೂ ಮನೆಯಲ್ಲಿ ಮಾತ್ರ ಇಬ್ಬರದು ಒಂದೇ ಪಕ್ಷವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *