ಕಾರವಾರ: ಕೊರೊನಾ ಆತಂಕದ ನಡುವೆಯೇ ಮೊದಲ ದಿನವಾದ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಇದೇ ವೇಳೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಹಾಜರಾಗಲು ಒಂದು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದ ಘಟನೆ ಶಿರಸಿಯಲ್ಲಿ ನಡೆದಿದೆ.
ಇಂದು ಜೂ.25 ರಂದು ನಿಗದಿಯಾಗಿದ್ದ ದ್ವಿತೀಯ ಭಾಷೆ ಪರೀಕ್ಷೆಗೆ ದೂರದ ಊರುಗಳಿಂದ ಹಾಜರಾಗಲು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಶಿರಸಿ ತಾಲೂಕಿನ ದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯ 42 ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದು ಕೆಲವೊಂದು ವಿದ್ಯಾರ್ಥಿಗಳು ಪಾಲಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಬಂದಿರುವುದರಿಂದ ಉಳಿದ 30 ವಿದ್ಯಾರ್ಥಿಗಳಿಗೆ ಒಂದು ಬಸ್ ವ್ಯವಸ್ಥೆ ಮಾಡಲಾಗಿತ್ತು.
Advertisement
Advertisement
ವಿದ್ಯಾರ್ಥಿ ಕುಮಾರ ಶ್ರೀಧರ ಗೌಡ ಶಿರಸಿಯ ಲಯನ್ಸ್ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿತ್ತು. ಆದ್ದರಿಂದ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.
Advertisement
ಇತ್ತ ಇದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ ಕುಮಾರಿ ರೇಣುಕಾ ಗೌಡ ಪ್ರತಿ ದಿನ ಪರೀಕ್ಷೆ ಬರೆಯಲು ಶಿರಸಿಗೆ ಹೋಗಿ ಬರಬೇಕಾಗಿತ್ತು. ಆದರೆ ಪ್ರತಿದಿನ ವಿದ್ಯಾರ್ಥಿನಿ ಶಿರಸಿಗೆ ಹೋಗಿ ಬರುವುದರಿಂದ ತಮ್ಮ ಊರಿಗೆ ಕೊರೊನಾ ಬರುತ್ತದೆ ಎನ್ನುವ ಭಯಕ್ಕೆ ಗ್ರಾಮಸ್ಥರು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನಿರ್ಬಂಧ ಹೇರಿದ್ದರು. ಆದರೆ ಸರ್ಕಾರಿ ಪ್ರೌಢಶಾಲೆ ದೇವನಹಳ್ಳಿ ಶಾಲೆಯ ಶಿಕ್ಷಕಿ ಶ್ರೀಮತಿ ರೂಪಾ ನಾಯ್ಕ ಅವರು ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿನಿಗೆ ವಸತಿ ವ್ಯವಸ್ಥೆ ಮಾಡಿ ಸರ್ಕಾರಿ ಪ್ರೌಢಶಾಲೆ ನಿಲೇಕಣಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.
Advertisement
ಉಳಿದಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತೆ ಕೈಗೊಳ್ಳಲಾಗಿತ್ತು. ಇಂದು ನಡೆದ ದ್ವಿತೀಯ ಭಾಷೆ ಪರೀಕ್ಷೆಗೆ 7.85 ಲಕ್ಷ ವಿದ್ಯಾರ್ಥಿಗಳ ಪೈಕಿ 7.71 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಕಂಟೈನ್ಮೆಂಟ್ ಝೋನ್‍ನಿಂದ ಬಂದಿದ್ದ 998 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಿರ್ವಹಿಸಲಾಯ್ತು. ದೇಹದ ಉಷ್ಣಾಂಶದಲ್ಲಿ ಏರಿಳಿತ ಕಂಡು ಬಂದ 201 ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. 12 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳು ಅವರಿದ್ದ ಜಾಗದಲ್ಲೇ ಪರೀಕ್ಷೆ ಬರೆದಿದ್ದಾರೆ. 14 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಕಾರಣ ತಿಳಿದುಕೊಂಡು ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.